Pages

Thursday, October 15, 2009

ಬೆಳಕಿನ ಹಬ್ಬ ದೀಪಾವಳಿಯ ಶುಭಾಶಯಗಳು!

ಮನೆ ಮನವ ಬೆಳಗಲು ಮತ್ತೆ ಬಂದಿದೆ ದೀಪಾವಳಿ. ಜ್ಞಾನದ ಅಂಧಕಾರ ಅಳಿಸಿ, ಅರಿವನು ಅರಳಿಸುವ ಹಣತೆಗಳು ಎಲ್ಲೆಲ್ಲೂ ಬೆಳಗಲಿ:)

ವಾರಾಂತ್ಯದಲ್ಲಿ ಬಂದಿರುವುದರಿಂದ ಗೆಳೆಯರ ಜೊತೆಗೂಡಿ ಹಬ್ಬ ಆಚರಿಸಬಹುದು. ಕಳೆದ ವರ್ಷ ನನ್ನ ಕೆಲವು ಸ್ನೇಹಿತೆಯರು ಮಾಡಿದ್ದ ಬಣ್ಣಬಣ್ಣದ ದೀಪಗಳ ಫೋಟೋ ಮತ್ತೆ ಕೆಲವು ದೀಪಾವಳಿ ಹಾಡುಗಳನ್ನು ಇಲ್ಲಿ ಹಂಚಿಕೊಂಡಿದ್ದೆ. ಈ ವರ್ಷ ನಾನೂ ಕೂಡ ಮಕ್ಕಳಾಟದ ಮಣ್ಣಿನಿಂದ(Play Dough) ಕೆಲವು ದೀಪಗಳನ್ನು ಮಾಡಿರುವೆ ನೋಡಿ!
ಹಾಗೆಯೆ, ನಿಂತು ಹೋಗಿರುವ ಹೇಮಂತರ ಬ್ಲಾಗನ್ನು ಸದ್ಯಕ್ಕೆ ನಾನೆ ಮುಂದುವರೆಸುವೆ. ಹಬ್ಬಕ್ಕೆಂದು ಅಲ್ಲೊಂದು ಲೇಖನ ಬರೆದಿರುವೆ ಓದಿ/ ನೋಡಿ ಬನ್ನಿ. Deepavali wishes on stamps

ಕೆ.ಎಸ್.ನರಸಿ೦ಹಸ್ವಾಮ ಈ ಕವನ ನಿಮ್ಮೊ೦ದಿಗೆ ಹ೦ಚಿ ಕೊಳ್ಳುವ ಆಸೆಯಾಯ್ತು.

ದೀಪಾವಳಿ


ಹೂವು ಬಳ್ಳಿಗೆ ದೀಪ
ಹಸಿರು ಬಯಲಿಗೆ ದೀಪ
ಹುಲಿಯ ಕಣ್ಣಿನ ದೀಪ ಕಾಡಿನಲ್ಲಿ !


ಮುತ್ತು ಕಡಲಿಗೆ ದೀಪ
ಹಕ್ಕಿ ಗಾಳಿಗೆ ದೀಪ
ಗ್ರಹತಾರೆಗಳ ದೀಪ ಬಾನಿನಲ್ಲಿ.

ಬಲ್ಮೆ ತೋಳಿಗೆ ದೀಪ
ದುಡಿಮೆ ಬೆವರಿನ ದೀಪ
ಸಹನೆ ಅನುಭವ ದೀಪ ಬದುಕಿನಲ್ಲಿ !

ಮುನಿಸು ಒಲವಿಗೆ ದೀಪ
ಉಣಿಸು ಒಡಲಿಗೆ ದೀಪ
ಕರುಣೆ ನ೦ದಾ ದೀಪ ಲೋಕದಲ್ಲಿ

ತೋರಣನ ತಳಿರಲ್ಲಿ
ಹೊಸಿಲ ಹಣತೆಗಳಲ್ಲಿ
ಬಾಣಬಿರು ಸುಗಳಲ್ಲಿ ನಲಿವು ಮೂಡಿ !


ಕತ್ತಲೆಯ ಪುಟಗಳಲಿ
ಬೆಳಕಿನಕ್ಷತ್ರಗಳಲಿ
ದೀಪಗಳ ಸ೦ದೇಶ ಥಳಿಥಳಿಸಲಿ.

ಬೆಳಕಿನಸ್ತಿತ್ವವನೆ
ಅಣಕಿಸುವ ಕತ್ತಲೆಗೆ
ತಕ್ಕ ಉತ್ತರವಲ್ಲಿ ಕೇಳಿಬರಲಿ !


ದೀಪಾವಳಿಯ ಜ್ಯೋತಿ
ಅಭಯ ಹಸ್ತವನೆತ್ತಿ
ಎಲ್ಲರಿಗೆ ಎಲ್ಲಕ್ಕೆ ಶುಭಕೋರಲಿ.

Wednesday, September 30, 2009

ಕರ್ಕಿಯವರ ದಿವ್ಯ ಜ್ಯೋತಿ!

ದಿವ್ಯ ಜ್ಯೋತಿ
ತಿಳಿ ನೀಲದಲ್ಲಿ ತಾ ಲೀನವಾಗಿ ಅವ ಹೋದ ದೂರ ದೂರ
ಬೆಳಗಿಹುದು ಇಲ್ಲಿ ಅವ ಬಿಟ್ಟ ಬೆಳಕು: ಇನ್ನೊಮ್ಮೆ ಏಕೆ ಬಾರ?

ಅಂದು ಸಂಜೆ ಪ್ರಾಥಱನೆಗೆ ದೇವಮಂದಿರದ ದಾರಿಯಲ್ಲಿ
ಆಚೆ ಈಚೆ ಮೊಮ್ಮಕ್ಕಳಿಬ್ಬರಲಿ ಮೈಯಭಾರ ಚೆಲ್ಲಿ
ಜಗದ ಕರುಣೆ ನಡೆವಂತೆ ನಡೆದು ಮಂದಿರದ ಪೀಠವೇರಿ
ನಿಂದನಿಲ್ಲೊ! ಜಡವುಳಿದು ಜೀವವೊಂದಾಯ್ತು ದೇವನಲ್ಲಿ.

ಎಸೆದ ಗುಂಡಿಗಾ ಕುಸಿದ ದೇಹದಲಿ ವಿಮಲ ರಕ್ತ ಚೆಲ್ಲಿ
ಮೀಯಿಸಿತ್ತು ಈ ಜಗದ ಮನವನೇ ಶೋಕ ಜಲಧಿಯಲ್ಲಿ
ಮುಗಿದ ಕೈಯು ಮುಗಿದಂತೆ ಇತ್ತು: ನೆಲಸಿತ್ತು ಕ್ಷಮೆಯು ಮೊಗದಿ
ಎದೆಯೊಳೆಂಥ ತಿಳಿಭಾವವಿತ್ತು! ಅದನಾವ ಬಲ್ಲ ಜಗದಿ?

ಹೋದ ಹೋದನವ ತ್ಯಾಗಜೀವನದ ತುತ್ತ ತುದಿಯನೇರಿ
ಏರಿ ಏರಿದೊಲು ಅಂತರಂಗದೈಸಿರಿಯ ಜಗಕೆ ತೂರಿ
ಸತ್ಯ ಪ್ರೇಮಗಳ ಸತ್ವವನ್ನೆ ಕಣ್ಣೆದುರು ಎತ್ತಿ ತೋರಿ
ಬೇರೆ ಲೋಕದನುಭಾವ ಬೀರಿ ಹೋದನಾವ ದಾರಿ?

ಎನಿತು ಸರಳ ನುಡಿ, ಎಷ್ಟು ಸಹಜ ನಡೆ ಮನದ ಮಹತಿಯೇನು!
ಅವನ ಎದೆಯ ಉನ್ನತಿಯ ನಿಲುಕುವುದು ಯಾವ ಗಿರಿಯ ಸಾನು?
ಇಹುದೆ ಅವನ ಕರುಣೆಯನು ಧರೆಗೆ ಕರೆವಂಥ ಕಾಮಧೇನು?
ಅವನು ಗೈದ ಲೀಲೆಯಲಿ ಲಯಸಿತೆಂಥವರ "ನಾನು-ನಾನು ".

ತಿಳಿದಿಹುದು ಚಿತ್ತ, ಹರಿದಿಹುದು ನೋಟ ಮೇಲಕ್ಕೆ ಬಾನಿನೆಡೆಗೆ
ಆ ಜಾಡ ಹಿಡಿದು ಇಳಿದಂತೆ ಇಹುದು ಬೆಳಕೊಂದು ಕೆಳಗೆ ಇಳೆಗೆ
"ಏನಷ್ಟು ಭ್ರಾಂತಿ? ಕಾಣದೆಯೆ ಜ್ಯೋತಿ?" ಎಂಬರುಹು ಮೂಡಲೊಡನೆ
ಬೆಳಕ ನಂಬಿ ನಿಂದಿಹನು ಧೀರ ಎದೆ ತೆರೆದು ನಾಡ ಕರೆಗೆ.
--ಡಾ ದುಂಡಪ್ಪ ಸಿದ್ಧಪ್ಪ ಕರ್ಕಿ

ಯಾವುದೇ ಕನ್ನಡ ಸಮಾರಂಭ ಸಾಮಾನ್ಯವಾಗಿ ಶುರುವಾಗುವುದು "ಹಚ್ಚೇವು ಕನ್ನಡದ ದೀಪ" ಭಾವ ಗೀತೆಯಿಂದ. ಹಾಡು ಇಲ್ಲಿ ಕೇಳಿ ಈ ಗೀತೆಯಿಂದ, ಇದರ ರಚನಕಾರ "ಡಾ ದುಂಡಪ್ಪ ಸಿದ್ಧಪ್ಪ ಕರ್ಕಿ" ಯವರು ಕನ್ನಡಿಗರ ಮನೆಮಾತಾಗಿಬಿಟ್ಟಿದ್ದಾರೆ. ಇವರ ಕವನ ಸಂಕಲನಗಳು ನಕ್ಷತ್ರ ಗಾನ, ಭಾವ ತೀರ್ಥ, ಗೀತ ಗೌರವ, ಕರಿಕೆ ಕಣಗಿಲು, ನಮನ, ತನನ ತೋಂ, ಬಣ್ಣದ ಚೆಂಡು... ನಕ್ಷತ್ರ ಗಾನ ಪ್ರಕಟವಾದ ಕರ್ಕಿಯವರ ಮೊದಲ ಕವನ ಸಂಕಲನ. ’ಹಚ್ಚೇವು ಕನ್ನಡದ ದೀಪ’ ವನ್ನು ಒಳಗೊಂಡಿರುವ ಕವನಸಂಕಲನ ಇದು. ಭಾವತೀರ್ಥ ದಲ್ಲಿ, ನಮ್ಮ ನಾಡಿನ ಕಾರಾವರ, ಗೋಕರ್ಣ, ಕೂಡಲ ಸಂಗಮ, ಜೋಗ ಇತ್ಯಾದಿ ಹಲವಾರು ಪ್ರೇಕ್ಷಣೀಯ ಸ್ಥಳಗಳ ವರ್ಣನೆಯಿದೆ. ಕರ್ಕಿಯವರು ಮಕ್ಕಳಿಗಾಗಿ ರಚಿಸಿರುವ ಬಣ್ಣದ ಚೆಂಡು (ನನ್ನ ಮಗಳ ಬ್ಲಾಗ್ ನಲ್ಲಿದೆ ಓದಿ) ಮತ್ತು ತನನ ತೋಂ ಕವನ ಸಂಕಲನಗಳು ಬಹಳ ಸರಳವಾಗಿದ್ದು, ಮಕ್ಕಳಿಗೆ ಕಲಿಸಿಕೊಡಲು ಚೆನ್ನಾಗಿವೆ. ಬೆಲ್ಲ ತಿನ್ನುವ ಮಲ್ಲ ಇತ್ಯಾದಿ ಕಥಾನಕ ಪದ್ಯಗಳಾಗಿದ್ದು ಮಕ್ಕಳಲ್ಲಿ ಆಸಕ್ತಿ ಮೂಡಿಸುವಂತವಾಗಿವೆ. ಕರ್ಕಿಯವರ "ದಿವ್ಯ ಜ್ಯೋತಿ", ಮಹಾತ್ಮ ಗಾಂಧಿಯವರು ಮರಣ ಹೊಂದಿದಾಗ ಬರೆದ ಕವನ.

ಕರ್ಕಿಯವರ ತನನ ತೋಂ ಜೊತೆಗೆ ಈ ಕವನವನ್ನು ಕಳುಹಿಸಿ ಕೊಟ್ಟ ಮಂಜುನಾಥ್ ಬೊಮ್ಮನಕಟ್ಟಿ ಅವರಿಗೆ ವಂದನೆಗಳು!!

Monday, August 31, 2009

ಓಡಿ ಬಾ ಓಡೋಡಿ ಬಾ - ಚಕ್ರತೀರ್ಥ

ಈ ಇಬ್ಬರು ಬಾಲನಟರು ಯಾರು ಗೊತ್ತಾ?

ಚಕ್ರತೀರ್ಥ (1967) -

ಸಾಹಿತ್ಯ: ಆರ್.ಎನ್.ಜಯಗೋಪಾಲ್
ಸಂಗೀತ: ಟಿ.ಜಿ.ಲಿಂಗಪ್ಪ
ಗಾಯನ: ಬಿ.ಕೆ.ಸುಮಿತ್ರ ಮತ್ತು ಬೆಂಗಳೂರು ಲತಾ.

ಝೂಟ್.......
ಹಾಹಾಹಾಹಹ ಹಾಹಾ...ಲಲಲಲಲಲಾಲಾ

ಓಡಿ ಬಾ ಓಡೋಡಿ ಬಾ ಚಿನ್ನ ನನ್ನ ಬೆನ್ನ ಹಿಂದೆ ಓಡಿ ಬಾ
ಓಡುವೇ ನಾ ಓಡುವೇ ಜಿಂಕೆ ಹಾಗೆ ಓಡೀ ನಿನ್ನಾ ಕೂಡುವೇ
ಓಡಿ ಬಾ..ಝೂಟ್...

ಮಣ್ಣಿನಿಂದ ಕಪ್ಪೆಗೂಡು ಕಟ್ಟಬಲ್ಲೆಯಾ
ಅಲ್ಲಿ ನೀನು ಕಪ್ಪೆಯೊಂದ ಸಾಕಬಲ್ಲೆಯಾ
ಕಣ್ಣು ಮುಚ್ಚಿ ನನ್ನಾ ಹಿಡಿಯಬಲ್ಲೆಯಾ
ನಾ ಹಾರೆದಂತೆ ದೂರ ನೀನು ಹಾರಬಲ್ಲೆಯಾ...ಝೂಟ್...

ನನ್ನಾ ರೀತಿ ರೆಂಬೆ ಹತ್ತಿ ನೀನು ನೋಡುವಾ
ನನ್ನಾ ಸಾಟಿ ಕುಂಟೊಬಿಲ್ಲೇ ಆಡು ನೋಡುವಾ
ಸುತ್ತಿ ಸುತ್ತಿ ಲಾಗಾ ಹಾಕು ಅಮ್ಮಯ್ಯಾ
ಈ ಕೋತಿಯಾಟ ದೊಂಬರಾಟ ಬೇಡ ದಮ್ಮಯ್ಯಾ...ಝೂಟ್...

ಕಾಗದದ ದೋಣೀಯೊಂದ ನಾವು ಮಾಡುವಾ
ನೀರಿನಲ್ಲೀ ದೋಣಿಯನ್ನು ತೇಲಿ ಬಿಡುವಾ
ಅಂಚಿನಲ್ಲಿ ನಿಂತೂ ನಾವು ನೋಡುವಾ
ಹಾಯಾಗೀ ಒಂದಾಗೀ ಇನ್ನೆಂದೂ ಬಾಳುವಾ...ಝೂಟ್...

ಓಡಿಬಾ ....ನಾ ಓಡುವೇ...ಓಡಿಬಾ...ಝೂಟ್....

Friday, August 21, 2009

ಗಣಪನಿಂದ ಆಗದಿರಲಿ ಪರಿಸರಕ್ಕೆ ಲೋಪ!!

ಎಲ್ಲರಿಗೂ ಗೌರಿ ಗಣೇಶ ಹಬ್ಬದ ಶುಭಾಶಯಗಳು!!

ಗಣೇಶ ಹಬ್ಬ ಬಂತೆಂದ್ರೆ ಈಮೈಲ್, ಆರ್ಕುಟ್, ಬ್ಲಾಗ್, ಫೇಸ್ಬುಕ್, ಟ್ವಿಟ್ಟರ್, ಎಲ್ಲೆಲ್ಲೂ ಹಬ್ಬದ ಶುಭಾಶಯಗಳ ಸುರಿಮಳೆ.:)

ಹಬ್ಬ ಮುಗಿದಮೇಲೆ ಮುಂಬೈಯಲ್ಲಿ ಅರ್ಧಂಬರ್ಧ ಮುಳುಗಿದ/ ಮುರಿದ ಮೂರ್ತಿಗಳ ಫೋಟೋ ಮತ್ತು ವಿಗ್ರಹಗಳಲ್ಲಿ ಉಪಯೋಗಿಸುವ ಬಣ್ಣಗಳಲ್ಲಿರುವ ಲೆಡ್ ಮತ್ತಿತರೆ ರಾಸಾಯನಿಕಗಳಿಂದ ಆಗುವ ಹಾನಿಗಳ ಕುರಿತು ಹಲವು forward ಮೈಲ್ ಗಳು !!

ಇದು ಪ್ರತಿವರ್ಷ ನಡಿಯುತ್ತಲೇ ಇದೆ. ಆದರೆ ಪರಿಸರಪ್ರೇಮಿ ಗಣಪನ ವಿಗ್ರಹಗಳು ಈಗ ಹೆಚ್ಚು ಜನಪ್ರಿಯವಾಗಿದೆ. ಯಾವುದೇ ಬಣ್ಣವಿಲ್ಲದೇ ಅಥವಾ ತರಕಾರಿ/ಹೂವುಗಳಿಂದ ತಯಾರಿಸಲಾದ ಬಣ್ಣಗಳಿಂದ ಅಲಂಕರಿಸಲ್ಪಟ್ಟ ಮೂರ್ತಿಗಳು ಈಗ ಎಲ್ಲೆಲ್ಲೂ ಸಿಗುತ್ತವೆ. ತಲಹಸಿ ಅಂತಹ ಸಣ್ಣ ಊರಿನಲ್ಲೂ ಈಗ ಇವು ಲಭ್ಯವಿದೆ. ಇವುಗಳ ಬಗ್ಗೆ ಇನ್ನಷ್ಟು ತಿಳಿಯೋಣ...

ಪರಿಸರ ಗಣಪತಿ :
ಈ ತಾಣದಲ್ಲಿ ಗಣೇಶ ವಿಗ್ರಹವನ್ನು ಸ್ವಂತ ನಾವೆ ಹೇಗೆ ತಯಾರಿಸಬಹುದು ಎಂಬುದರ ಬಗ್ಗೆ ವಿವರವಾಗಿ ವಿಡಿಯೋ ಮೂಲಕ ತಿಳಿಸಲಾಗಿದೆ. ಅಲ್ಲದೇ ಅವು ಮಾರಾಟಕ್ಕೆ ಎಲ್ಲಿ ಲಭ್ಯವಿದೆ ಮತ್ತಿತರ ಮಾಹಿತಿಯಿದೆ.

Hindu Blog :
ಈ ಬ್ಲಾಗಿನಲ್ಲಿ ಮಣ್ಣಿನಿಂದ ಅಥವಾ ಕಾಗದದಿಂದ ಗಣೇಶನನ್ನು ಮಾಡುವುದು ಹೇಗೆ ಅಂತ ಸುಲಭವಾಗಿ ತಿಳಿಸಲಾಗಿದೆ.
ಕಾಗದ ಗಣೇಶನನ್ನು ಮಾಡುವುದು ಹೀಗೆ.

ಮುಂಬೈನಲ್ಲಿರುವ ರಮೇಶ್ ಅವರು ತೆಂಗಿನಕಾಯಿ ಚಿಪ್ಪಿನಲ್ಲಿ ಗಣಪನನ್ನು ಮಾಡುತ್ತಾರೆ. ಅವರ ಗಣಪನ ವಿಷೇಶ ಏನಂದ್ರೆ ಹೊಟ್ಟೆಯ ಜಾಗದಲ್ಲಿ ಒಂದು ಇಡಿಯಾದ ತೆಂಗಿನಕಾಯಿಯನ್ನೇ ಉಪಯೊಗಿಸಿದ್ದಾರೆ. ಈ ಭಾಗಕ್ಕೆ ಪ್ರತಿವರ್ಷ ಹೊಸ ತೆಂಗಿನಕಾಯಿ ಇಟ್ಟರೆ ಆಯಿತು. ಪೂಜೆಯ ನಂತರ ಸಾಂಕೇತಿಕವಾಗಿ ಗಣಪನನ್ನು ನೀರಿನಲ್ಲಿ ಮುಳುಗಿಸಿದ ಮೇಲೆ ಈ ಕಾಯಿಯನ್ನು ಒಡೆದು ’ಪ್ರಸಾದ’ದ ರೂಪದದಲ್ಲಿ ಬಳಸಬಹುದು ಅಥವಾ ನೀರಿನಲ್ಲಿ ಮೊಳಕೆ ಬರುವವರೆಗೆ ಹಾಗೆಯೇ ಬಿಟ್ಟು ನಂತರ ಅದನ್ನು ಬೆರೆಡೆ ನೆಡಬಹುದು!! ಆವರ ಕೆಲವು ಗಣಪತಿಗಳನ್ನು ಇಲ್ಲಿ ಕಾಣಬಹುದು.

ಹಲವು ಸಂಸ್ಥೆಗಳು ಈಗ ಇವುಗಳ ಬಗ್ಗೆ ವಿಡಿಯೋ ತಯಾರಿಸಿ ಜನರಗೆ ಮುಟ್ಟುವಂತೆ ಮಾಡಿದ್ದಾರೆ

ಇಲ್ಲಿ ಮಣ್ಣಿನ ಗಣಪ ಸಿಗುವುದಿಲ್ಲ ಅನ್ನೋ ಕಾರಣಕ್ಕೆ ನಾನು ಮತ್ತು ನನ್ನ ಅನೆಕ ಗೆಳತಿಯರು ಮಣ್ಣಿನಿಂದ, ಅರಿಶಿನದಿಂದ, ಗೋಧಿಹಿಟ್ಟಿನಿಂದ ಗಣೇಶನನ್ನು ಮಾಡಿ ಪೂಜಿಸಿದ್ದೆವು. ಅವುಗಳ ಫೋಟೋಗಳು ಇಲ್ಲಿ ಮತ್ತು ಇಲ್ಲಿವೆ.

ಸಿಡ್ನಿಯಲ್ಲಿರುವ ತೆಲುಗು ಅಸೊಸಿಯೇಷನ್ ಅವರು ಮಕ್ಕಳಿಗಾಗಿ ’ಗಣಪ ಮಾಡಿ ನೋಡು’ ಶಿಬಿರ ಏರ್ಪಡಿಸಿದ್ದರು. ಅದರ ವಿಡಿಯೋ ಇಲ್ಲಿ ಮತ್ತು ಇಲ್ಲಿ.

ಅಲ್ಲದೇ ಅಮೇರಿಕದ ನ್ಯೂಯಾರ್ಕಿನಲ್ಲಿರುವ ಜೆನ್ನಿಫರ್ ಅವರು ತಮ್ಮ ಪತಿ ಕುಮಾರ್ ಅವರನ್ನು ಮದುವೆಯಾದಮೇಲೆ ತಮ್ಮ ಮನೆಯಲ್ಲಿ ಪ್ರತಿವರ್ಷವೂ ತಾವೇ ಸ್ವತಃ ಗೋಧಿಹಿಟ್ಟಿನಿಂದ ಗಣಪನನ್ನು ಮಾಡಿ ಪೂಜಿಸುತ್ತಿದ್ದಾರೆ ನೋಡಿ.
ನೀವು ಕೂಡ ಈ ವರ್ಷ ಪರಿಸರ ಗಣಪನನ್ನು ಪೂಜಿಸಿರಿ ಮತ್ತು ಈ ವಿಚಾರವನ್ನು ನಿಮ್ಮ ಗೆಳೆಯರಲ್ಲೂ ಹಂಚಿಕೊಳ್ಳಿ.
ಈಗ ಮತ್ತೆ ಬಂದಿರುವ ಗಣಪ!
ಅವನಿಂದ ಆಗದಿರಲಿ ಪರಿಸರಕ್ಕೆ ಲೋಪ!!

ಅಂದ ಹಾಗೆ ಹೇಳೋದು ಮರೆತಿದ್ದೆ, ಕಳೆದ ವರ್ಷ ಗಣೇಶ ಹಬ್ಬದ ಒಂದು ದಿನಕ್ಕೆ ಮುಂಚೆ ನನ್ನೀ ಬ್ಲಾಗ್ ಶುರು ಮಾಡಿದ್ದೆ!

Tuesday, August 11, 2009

ಕವನಕ್ಕೆ ಶೇಪ್!!

ಕೆಲವು ದಿನಗಳ ಹಿಂದೆ ಡಿಸೈನರ್ ಕವಿತೆಗಳ ಬಗ್ಗೆ ಬರೆದಿದ್ದೆ. ಅದನ್ನೋದಿದ ಸ್ನೇಹಿತರು ಅದೇ ರೀತಿ ಪ್ರಯತ್ನಿಸಲು ಉತ್ತೇಜಿಸಿದರು. ನನ್ಗೆ ಕವನ ಬರಿಯೋಕೇ ಬರೋಲ್ಲ ಅಂಥದ್ರಲ್ಲಿ ಶೇಪ್ಡ್ ಕವಿತೆ ಇನ್ನೆಲ್ಲಿ ಅಂತ ನನ್ನ್ ಪಾಡಿಗೆ ಸುಮ್ನಿರೋದು ಬಿಟ್ಟು, ಅವರಿವರ ಕವನಕ್ಕೆ ಶೇಪ್ ಕೊಡೋಣ ಅಂತ ಕೂತೆ.

ಮೊದಲು ಸುಬ್ರಮಣ್ಯ ಭಟ್ಟರ ಮೀನು ನನ್ನ ಕೈಸೇರಿ ಹೀಗಾಯ್ತು...(ಕವನದ ಮೇಲೆ ಕ್ಲಿಕ್ ಮಾಡಿದ್ರೆ ದೊಡ್ಡದಾಗಿ ತೆರೆದುಕೊಳ್ಳುತ್ತೆ, ಓದಲು ಸುಲಭ)ಇದು ಸ್ವಲ್ಪ ಸುಮಾರಾಗಿ ಮೂಡಿದ್ದರಿಂದ ’ಮರ’ ಬರೆಯೋಣವೆನಿಸಿ ನಾನೇ ಪದಗಳ ಪೋಣಿಸಲು ಕೂತು, ಸೋತು ಕೊನೆಗೆ ಪು.ತಿ.ನ ಅವರ ಕವನವನ್ನು ಅರುಣ್ ಪ್ರಕಟಿಸಿದ್ದನ್ನು ಓದಿ ಅದಕ್ಕೆ ಈ ಅವತಾರ ಮಾಡಿಟ್ಟೆ.ಮುಂದೆ ಯಾರ ಕವನಕ್ಕೆ ಗ್ರಹಚಾರ ಕಾದಿದೆಯೋ ಕಾದು ನೋಡಿ !

ಮೀನುಗಾರಿಕೆಯಲ್ಲಿ ಡಾಕ್ಟರೇಟ್ ಪಡೆದ ಡಾ. ಆಜಾದ್ ಅವರು ರಚಿಸಿದ ಮೀನು ಅವರ "ಭಾವ-ಮಂಥನ" ದಲ್ಲಿ.

Tuesday, August 4, 2009

ವಿದೇಶದಲ್ಲಿ ವರಮಹಾಲಕ್ಷ್ಮಿ!!!

ನಮ್ಮ ಮನೆಯ ವರಮಹಾಲಕ್ಷ್ಮಿ ಹಬ್ಬದ ಫೋಟೋಗಳಿವು.ಮದ್ಯಾಹ್ನದ ನೈವೇದ್ಯಸಂಜೆಯ ನೈವೇದ್ಯ
ನನ್ನ ಮಗಳು ನಮ್ಮೊಂದಿಗೆ ಹಬ್ಬ ಮಾಡಿದ್ದು ಹೀಗೆ.

ಪ್ರತಿಸರ್ತಿ ನಮ್ಮ ಮನೆಯ ಹಬ್ಬದ ಫೋಟೋಗಳನ್ನು ನೋಡಿದಾಗ ನನ್ನ ಹಲವು ಗೆಳೆಯರು ’ದೂರದೂರಿನಲ್ಲಿದ್ದು ಇವೆಲ್ಲಾ ಮಾಡ್ತೀಯಾ?’ಅಂತ ಆಶ್ಚರ್ಯದಿಂದ ಕೇಳೋದುಂಟು. ಅವರುಗಳಿಗೆ ನಾನೊಬ್ಬಳೇ ಅಲ್ಲ, ನನ್ನ ಹಾಗೆ ವಿದೇಶದಲ್ಲಿದ್ದು ಬಹಳ ಶ್ರದ್ಧೆ ಆಸಕ್ತಿಯಿಂದ ಹಬ್ಬ ಮಾಡುವ ಹಲವು ಸ್ನೇಹಿತೆಯರ ಪರಿಚಯ ಮಾಡಿಸೋ ಹಂಬಲ. ಹಬ್ಬ ಮುಗಿದು ನಾಲ್ಕೈದು ದಿನಗಳಾದರೂ ನನ್ನ ಹಬ್ಬದ ಫೋಟೋಗಳನ್ನು ಹಾಕದೇ ಇರಲು ಕಾರಣ ಇದೇ, ಎಲ್ಲರ ಫೋಟೋಗಳಿಗಾಗಿ ಕಾಯ್ತಾಯಿದ್ದೆ.

ಅಮೇರಿಕಾದಲ್ಲಿರುವ ನನ್ನ ಹಲವಾರು ಸ್ನೇಹಿತೆಯರು ಹಬ್ಬ ಮಾಡಿ ಲಕ್ಷ್ಮಿ ದೇವಿಯನ್ನು ಪೂಜಿಸಿದ್ದರು, ಅವರ ಫೋಟೋಗಳನ್ನ ನನ್ನೊಂದಿಗೆ ಹಂಚಿಕೊಂಡರು. ಬನ್ನಿ ಅವರೆಲ್ಲರ ಮನೆ ದೇವಿಯ ದರ್ಶನ ಮಾಡಿ ಬರೋಣ.

ಫ್ಲೋರಿಡಾದ ಫೋರ್ಟ್ ಲಾಡರ್ಡೇಲ್ ನಲ್ಲಿರುವ ಆತ್ಮೀಯ ಗೆಳತಿ, ಒಳ್ಳೆ ಹಾಡುಗಾರ್ತಿ ’ಸ್ಪೂರ್ತಿ’ ಇತರರಿಗೆ ಸ್ಪೂರ್ತಿ ಮೂಡುವಂತೆ ಹಬ್ಬ ಮಾಡಿದ್ದಾರೆ. ಅವರು ಎಷ್ಟು ಸುಂದರವಾಗಿ ದೇವರಿಗೆ ಸೀರೆಯುಡಿಸಿದ್ದಾರೆ ಗಮನಿಸಿ. ಇಲ್ಲೀಗ MS ಓದಲು ಹೊರಟಿರುವ ಅವರಿಗೆ ಶುಭವನ್ನು ಹಾರೈಸುತ್ತೇನೆ.2008ರ ಹಬ್ಬ!!

ಕ್ಯಾಲಿಫೋರ್ನಿಯಾದಲ್ಲಿರುವ ರೀಮಾ, ದೇವಿಯನ್ನು ಪೂಜೆ ಮಾಡಿದ್ದು ಹೀಗೆ ಹಲವು ಬಗೆಯ ದೀಪಗಳನ್ನು ಹಚ್ಚಿ, ಸೀರ್ಯುಡಿಸಿ, ನವಿಲುಗರಿಯಿಂದ ಅಲಂಕರಿಸಿ...
ಮಿನಿಯಾಪೋಲಿಸ್ ನಲ್ಲಿರುವ ಪೂಜಾ ಅವರು ಚಿನ್ನ ಮತ್ತು ಬೆಳ್ಳಿಯ ಹೂವುಗಳಿಂದ ಲಕ್ಷ್ಮಿಯನ್ನು ಪೂಜೆ ಮಾಡಿದ್ರು. ಕೆಲವೊಮ್ಮೆ ಇಲ್ಲಿ ಪೂಜೆಗೆ ಹೂವು ಸಿಗುವುದು ಬಲು ಕಷ್ಟ, ಅಂತ ಸಮಯದಲ್ಲಿ ಈ ಹೂವುಗಳು ಬಲು ಉಪಯುಕ್ತ! ಪೂಜಾ ಅವರು ಹಬ್ಬಕ್ಕೆ ತಮ್ಮ ಮನೆಗೆ ಅರವತ್ತಕ್ಕೂ ಹೆಚ್ಚಿನ ಸ್ನೇಹಿತರನ್ನು ಕರೆದಿದ್ದರಂತೆ!!!
ಇದೇ ರೀತಿ ನನ್ನ ಇನ್ನೊಬ್ಬ ಗೆಳತಿಯ ಬಳಿ ಬೆಳ್ಳಿಯ ವೀಳ್ಯದೆಲೆ, ಬಾಳೆಕಂಬ, ತೆಂಗಿನಕಾಯಿ, ತುಳಸಿಕಟ್ಟೆ ಇತ್ಯಾದಿಗಳಿವೆ. ಅಂತೂ ಎಲ್ಲೇ ಇದ್ದರೂ ಹಬ್ಬ ಮಾಡಬೇಕು ಅನ್ನೋ ಮನಸಿದ್ದರೆ ಹೀಗೆ ಏನಾದರು ಒಂದು ದಾರಿ ಹುಡುಕಿಕೊಂಡು ಮಾಡಬಹುದು ಅಲ್ವೆ:)

ಕೇಕ್ ರಾಣಿ ಎಂದೇ ಸ್ನೇಹಿತರಿಂದ ಕರೆಸಿಕೊಳ್ಳುವ ಅಟ್ಲಾಂಟದಲ್ಲಿರುವ ನಮ್ರತಾ ಬಿಡುವಿಲ್ಲದ ಕೇಕ್ ಆರ್ಡರ್ ಕೆಲಸದ ಮಧ್ಯೆಯೂ ಎಷ್ಟು ಚೆನ್ನಾಗಿ ಹಬ್ಬ ಮಾಡಿದ್ದಾರೆ ನೋಡಿ.
ಮೇರಿಲ್ಯಾಂಡಿನಲ್ಲಿರುವ ವಿನುತಾಪ್ರಸಾದ್ ಅವರು ಕೆಲಸಕ್ಕೆ ಹೋಗುತ್ತಿದ್ದರೂ ಹಬ್ಬ ಮಾಡೋದನ್ನ ನಿಲ್ಲಿಸಿಲ್ಲ. ಬೆಳಗ್ಗೆ ಬೇಗ ಎದ್ದು ಹಬ್ಬ ಮಾಡಿ ನಂತರ ಕೆಲಸಕ್ಕೆ ಹೋಗ್ತಾರೆ. ಅವರ ಮನೆ ಲಕ್ಷ್ಮಿದೇವಿ..ಹಬ್ಬಗಳಲ್ಲಿ ವಿಧವಿಧವಾದ ಅಲಂಕಾರ ಮಾಡೋದು ಅಂದ್ರೆ ಚಿತ್ರಶ್ರೀ ಅವರಿಗೆ ಬಲು ಇಷ್ಟ. ಇವರ ಹಲವು ಹಬ್ಬಗಳ ಫೋಟೋಗಳು ಪ್ರಜಾವಾಣಿ ಮತ್ತಿತರ ಪತ್ರಿಕೆಗಳಲ್ಲಿ ಪೋಸ್ಟಾಗಿವೆ!! ಅವರ ಕೆಲವು ಹಬ್ಬಗಳ ಫೋಟೋಗಳು...


ಆರ್ಕುಟ್ ನಲ್ಲಿರುವ Mrs South Indies ಎಂಬ ಬಳಗದ ಸದಸ್ಯೆಯರು ತಮ್ಮ ಮನೆಗಳಲ್ಲಿ ಹಬ್ಬ ಆಚರಿಸಿದ್ದು ಹೀಗೆ.

ಕಾರ್ಡಿಫ್ (UK)ನಲ್ಲಿರೋ ನನ್ನತ್ತಿಗೆ ಸಂಭ್ರಮದಿಂದ ಲಕ್ಷ್ಮಿ ಹಬ್ಬವನ್ನು ಆಚರಿಸಿದರು. ಹಬ್ಬದ ಫೋಟೋಗಳು ಇಲ್ಲಿವೆ.
ನ್ಯೂಜರ್ಸಿಯಲ್ಲಿರುವ ಶ್ರೀ ಅವರು ತಮ್ಮ ಬ್ಲಾಗಿನಲ್ಲಿ ವರಮಹಾಲಕ್ಷ್ಮಿಹಬ್ಬದ ಆಚರಣೆಯ ಬಗ್ಗೆ ಪೂರ್ತಿ ವಿವರ ಕೊಟ್ಟಿದ್ದಾರೆ.

"ಈಗಿನ ಕಾಲದ ಹೆಣ್ಣು ಮಕ್ಕಳಿಗೆ ಹಿರಿಯರು, ದೇವರು ಅಂದ್ರೆ ಭಯ-ಭಕ್ತಿಯಿಲ್ಲ" ಎಂದು ಎಲ್ಲರನ್ನು ಜನರಲೈಸ್ ಮಾಡಿ ಹೇಳೊ ಮಂದಿ, "ಅಮೇರಿಕಾಗೆ ಹೋದ ಮೇಲೆ ಬರೀ ಪ್ಯಾಂಟ್, ಸ್ಕರ್ಟ್ ಹಾಕ್ತಾಳೆ..ಇನ್ನು ಸಂಸಾರ ಹೇಗೆ ಮಾಡ್ತಾಳೋ" ಎಂದೆಲ್ಲಾ ರಾಗವೆಳೆಯೋ ಜನರೆಲ್ಲಾ ಒಮ್ಮೆ ಈ ಫೋಟೋಗಳನ್ನು ನೋಡಿ ನಿಮ್ಮ ಅಭಿಪ್ರಾಯಗಳನ್ನು ಬದಲಿಸಿಕೊಳ್ಳಿ.
ಹಾಗೆಯೆ, ಇಂಡಿಯಾದಲ್ಲಿದ್ದೇ "ಅಯ್ಯೋ, ಇವೆಲ್ಲಾ ಮಾಡಲು ನಮಗೆ ಟೈಮಿಲ್ಲ.. ರಂಗೋಲಿ ಬಿಡಲು ಬರೋದಿಲ್ಲ.. ಅಡಿಗೆ ಮಾಡಲು ಬರಲ್ಲ.. ಇದೆಲ್ಲಾ ಹಳೆ ಫ್ಯಾಷನ್.." ಇತ್ಯಾದಿ ಹೇಳುವ ಹೆಂಗಳೆಯರೂ ಇದರಿಂದ ಉತ್ತೇಜನ ಹೊಂದಲಿ :))

Thursday, July 30, 2009

ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು!!

ನಾಳೆ ವರಮಹಾಲಕ್ಷ್ಮಿ ಹಬ್ಬ. ಎಂದಿನಂತೆ ಅಮ್ಮನ ಮನೆಯಲ್ಲಿದ್ದಾಗ ಹಬ್ಬಗಳ ನೆನಪಾಗುತ್ತಿದೆ. ಬೆಂಗಳೂರಿನಲ್ಲಿ ಹಬ್ಬಗಳು ಬಂದರೆ ಎಲ್ಲೆಲ್ಲಿದ ಸಂಭ್ರಮ. ಮಾರುಕಟ್ಟೆಯ ತುಂಬಾ ಹಬ್ಬಕ್ಕೆ ಬೇಕಾಗುವ ಹೂವು ಪತ್ರೆಗಳು, ಹಣ್ಣುಗಳು, ಮಾವಿನ ಸೊಪ್ಪು-ಬಾಳೆ ಕಂದು, ಅಲಂಕಾರಕ್ಕೆ ಬಣ್ಣಬಣ್ಣದ ಕಾಗದಗಳು. ಹಬ್ಬದ ವಾರವೆಲ್ಲ ರೇಡಿಯೋ/ದೂರದರ್ಶನ ಎಲ್ಲರೂ ಭಾಗ್ಯಾದ ಲಕ್ಷ್ಮಿ ಬಾರಮ್ಮ ಅಂತ ಕರೆಯುವವರೇ :))

ಹಬ್ಬದ ದಿನ ಮುಂಜಾನೆ ಚುಮುಚುಮು ಬೆಳಕಿರುವಾಗಲೇ ಎದ್ದು ಮನೆ ಮುಂದೆ ದೊಡ್ಡ ರಂಗೋಲಿ ಹಾಕಿ, ಬಣ್ಣ ತುಂಬೋದು. ಆಮೇಲೆ ಬಾಗಿಲಲ್ಲಿ ಸದಾಯಿರುವ ಪ್ಲಾಸ್ಟಿಕಿನ ಹಾರ ತೆಗೆದು ಮಾರ್ಕೆಟ್ಟಿಂದ ತಂದ ಮಾವಿನ ಎಲೆಯ ತೋರಣ, ಹೂವಿನ ಹಾರ ಹಾಕಿದ್ರೆ ಮನೆಗೆ ಹಬ್ಬದ ಕಳೆ ಬಂದಿರುತ್ತೆ. ಹಿಂದಿನ ದಿನವೇ ದೇವಿಯನ್ನು ಕೂರಿಸಲು ಮನೆಯಲ್ಲಿರುವ ಟೇಬಲ್, ಸ್ಟೂಲ್ ಗಳಲ್ಲಾ ಸ್ಟೆಪ್ ಗಳಾಗಿ ಮಾರ್ಪಟ್ಟಾಗಿರುತ್ತಿದ್ದವು. ಸ್ನಾನ ಮುಗಿಸಿ ಅಮ್ಮ ಅಡಿಗೆ ಕೆಲಸ ಮಾಡುತ್ತಾ ನಮಗೆ ಹೇಳಿದಂತೆ ನಾವು ಪೂಜೆಗೆ ರೆಡಿ ಮಾಡೋದು. ನನಗೇ ನೆಟ್ಟಗೆ ಸೀರೆ ಉಡಲು ಬರದಿದ್ದರೂ ಹಬ್ಬಕ್ಕೆಂದು ಅಮ್ಮ ತಗೊಂಡ ಹೊಸ ಸೀರೆಯನ್ನು ಕಳಶಕ್ಕೆ ಉಡಿಸಿ, ಲಾಕರ್ ನಲ್ಲಿದ್ದ ಒಡವೆಗಳನ್ನೆಲ್ಲ ತಂದು ಕಲಶದ ಮೇಲೆ ಕುಳಿತಿರುವ ಲಕ್ಷ್ಮಿಯನ್ನ ಅಲಂಕರಿಸೋದು. ಸೀರಿಯಲ್‌ ಸೆಟ್‌ ಬೆಳಕು ಒಡವೆಗಳಿಗೆ ಇನ್ನೂ ಹೊಳಪು ತರಿಸ್ತಾಯಿತ್ತು. ಅಮ್ಮನ ಮನೆಯಲ್ಲಿ ಹಬ್ಬ 2005

ನಂತರ ಎಲ್ಲರೂ ಸೇರಿ ಗಣಪತಿ ಶಾಸ್ತ್ರಿಗಳು ಕ್ಯಾಸೆಟ್ಟಿನಲ್ಲಿ ಹೇಳಿಕೊಟ್ಟಂತೆ ಪೂಜೆ ಮಾಡೋದು. ನಾನು ಟೇಪ್‌ ರೆಕಾರ್ಡರ್‌ ಪಕ್ಕದಲ್ಲೇ ಕೂತಿರಬೇಕು. ನೈವೇದ್ಯ, ಮಂಗಳಾರತಿ ಮುಂತಾದವುಗಳಿಗೆ ಅಣಿ ಮಾಡಿಕೊಳ್ಳುವ ಸಮಯದಲ್ಲಿ ಕ್ಯಾಸೆಟ್ಟನ್ನು ಬಂದ್‌ ಮಾಡುವುದು. ಸಿದ್ಧವಾದ ನಂತರ ಮತ್ತೆ ಹಚ್ಚುವುದು ನನ್ನ ಕೆಲಸ. ಗಣಪತಿ ಶಾಸ್ತ್ರಿಗಳು ಬರದಿದ್ದರೂ ಅವರ ಮಂತ್ರ ಮನೆ ತುಂಬುತಿತ್ತು.

ಪೂಜೆಯಾದ ನಂತರ ಊಟ ..ಆಹಾ ಒಬ್ಬಟ್ಟು, ಪಾಯಸ, ಕೋಸಂಬರಿ, ಪಲ್ಯಗಳು ಮಾರ್ಕೆಟ್ಟಿಂದ ತಂದ ಬಾಳೆ ಎಲೆ ತುಂಬಾ ಬಡಿಸಿಕೊಂಡು ಎಲ್ಲರೂ ಒಟ್ಟು ಕೂತು ಊಟ ಮಾಡುವುದು.ಅಮ್ಮನ ಮನೆಯಲ್ಲಿ ಹಬ್ಬ 2007

ಸಂಜೆ ಅರಿಶಿನ ಕುಂಕುಮ ತಗೋಳೋಕೆ ಮುತೈದೆಯರೆಲ್ಲಾ ಮನೆಗೆ ಬರೋದು. ಅವರ ಮನೆಗಳಿಗೆ ನಾವು ಹೋಗೋದು, ಇದು ರಾತ್ರಿಯವರೆಗೆ ನಡೆಯುತ್ತಿತ್ತು. ರಾತ್ರಿ ಮತ್ತೊಮ್ಮೆ ದೇವಿಗೆ ಪೂಜೆ ಮಾಡಿ, ಕಲಶ ಕದಲಿಸಿದ ಮೇಲೆ ಊಟ, ನಿದ್ದೆ. ಮಾರನೆಯ ದಿನ ಕ್ಲೀನಿಂಗ್ ಕೆಲಸ!!

ಈಗ ಇಲ್ಲಿ ವಿವಿಧ ಭಾರತಿ / ದೂರದರ್ಶನ ಇಲ್ಲದಿದ್ದರೇನಂತೆ ನಮ್ಮನೆ ಕಂಪ್ಯೂಟರಿಲ್ಲೇ ಕಮಲದಾ ಮೊಗದೋಳೆ, ಕಮಲದಾ ಕಣ್ಣೋಳೆ ಕಮಲವಾ ಕೈಯಲ್ಲಿ ಹಿಡಿದೋಳೆ, ಮಹಾಲಕ್ಷ್ಮಿ ಮನೆಗೆ ಬಾರಮ್ಮ ಕೇಳುತ್ತಾ, ಅದೇ ಗಣಪತಿ ಶಾಸ್ತ್ರಿಗಳಿಂದ ವ್ರತವಿಧಾನವನ್ನು ಕನ್ನಡ ಆಡಿಯೋದಲ್ಲಿ ಕೇಳಿಸಿಕೊಂಡು ಪೂಜೆ ಮಾಡ್ತೀವಿ. ಆಫ್ರಿಕಾ, ಆಸ್ಟ್ರೇಲಿಯಾ ಇತರೆ ದೇಶಗಳನ್ನು ಹೋಲುವ ಆಕಾರದ ಒಬ್ಬಟ್ಟು ಮಾಡಿಕೊಂಡು, ಇಲ್ಲಿ ಸಿಗುವ ತರಕಾರಿಯ ಪಲ್ಯ ತಯಾರಿಸಿ ಪಿಂಗಾಣಿ ತಟ್ಟೆಯಲ್ಲಿ ಗೆಳೆಯರೊಡನೆ ಸೇರಿ ಊಟ ಮಾಡಿ ಹಬ್ಬ ಮಾಡ್ತೀವಿ.ನಮ್ಮನೆ ಹಬ್ಬ 2008

ನನ್ನ ಬ್ಲಾಗ್ ಓದುವ ಗೆಳೆಯರೆಲ್ಲರಿಗೆ ಮತ್ತು ಅವರ ಮನೆಯವರಿಗೆ ಹಾಗು ನೆಂಟರಿಷ್ಟರಿಗೆ ವರಮಹಾಲಕ್ಷ್ಮಿ ವ್ರತದ ಶುಭಾಶಯಗಳು. ಆ ದೇವಿಯು ಎಲ್ಲರ ಸಂಕಷ್ಟಗಳನ್ನು ದೂರಮಾಡಿ, ಬಾಳಿನಲ್ಲಿ ಸುಖ ಶಾಂತಿ ಶಾಶ್ವತವಾಗಿ ನೆಲೆಸುವಂತೆ ಮಾಡಿ, ಸಮೃದ್ಧಿಯನ್ನು ದಯಪಾಲಿಸಲಿ!!!

Friday, July 17, 2009

ಡಿಸೈನರ್ ಕವಿತೆಗಳು !!!

ಡಿಸೈನರ್ ಬಟ್ಟೆ , ಡಿಸೈನರ್ ವಾಚ್, ಡಿಸೈನರ್ ಟೋಪಿ ಎಲ್ಲಾ ಗೊತ್ತು ಇದ್ಯಾವುದ್ರಿ ರೂಪ ಡಿಸೈನರ್ ಕವಿತೆ ಅಂತೀರಾ? ಬನ್ನಿ ನೋಡೋಣ ಡಿಸೈನ್ ಡಿಸೈನ್ ಕವಿತೆಗಳನ್ನ....
ಮೊನ್ನೆ ಲೈಬ್ರರಿಗೆ ಹೋಗಿದ್ದಾಗ ಅಲ್ಲಿ ಮಕ್ಕಳಿಗೆ ರೀಡಿಂಗ್ ಟೈಂ ನಡಿತಾಯಿತ್ತು. ನೋಟಿಸ್ ಬೋರ್ಡಿನಲ್ಲಿ ಅಂದಿನ ವಿಷಯ "ಶೇಪ್ಡ್ ಪೋಯಟ್ರಿ" ಅಂತಿತ್ತು. ಕುತೂಹಲ ಹೆಚ್ಚಾಗಿ ಅತ್ತ ಹೋದೆ. ಅಲ್ಲಿ ನಾನು ಕಂಡದ್ದು ಇವು:shape-poem-01.gif


ಈ ರೀತಿಯ ಪದ್ಯವನ್ನು ಕಾಂಕ್ರೀಟ್ ಪೊಯೆಟ್ರಿ ಅಂತಲೂ ಕರಿತಾರೆ. ಕವಿತೆಯಲ್ಲಿ ರುವ ವಸ್ತುವಿನ ರೂಪದಲ್ಲೇ ಪದ್ಯವನ್ನು ಬರೆಯುವುದೇ ಇದರ ವಿಶೇಷ. ಮರ, ಕಾಮನಬಿಲ್ಲು, ದೋಣಿ, ಬಗ್ಗೆ ಬರೆದ ಪದ್ಯಗಳೆಲ್ಲಾ ಅದೇ ಆಕಾರದಲ್ಲಿ ಇರುತ್ತವೆ. ಉದಾಹರಣೆಗೆ ಕೆಳಗಿನ ಚಿತ್ರಕವಿತೆಗಳನ್ನು ನೋಡಿ..

This
Christmas
end a quarrel.
Seek out a forgotten
friend. Dismiss suspicion,
and replace it with trust.
Write a love letter. Share some
treasure. Give a soft answer. Keep
a promise. Find the time. Forgo a grudge.
Forgive an enemy. Listen. Apologize if you
were wrong. Try to understand. Examine your
demands on others. Think first of someone else. Be
Be kind; be gentle. Appreciate. Laugh a little. Laugh a
little more. Express your gratitude. Gladden the heart of a
child. Welcome a stranger. Take pleasure in the beauty and the
wonder of Earth.
Speak your love.
Speak it again.
Speak it yet
Once again.

boat.jpg


ಅಲ್ಲಿ ಬಂದಿದ್ದ ಮಕ್ಕಳಿಗೆ ಇಂತಹ ಶೇಪ್ ಪೋಯಮ್ಸ್ ಬರೆಯಲು ಅವರು ಉತ್ತೇಜಿಸುತ್ತಿದ್ದರು. ಒಂದು ಚಿತ್ರವನ್ನು ಕೊಟ್ಟು ಅದರ ಕುರಿತು ಪದ್ತ ಬಎರಯಬೇಕು, ಅದೂ ಆ ಚಿತ್ರ್ದ ಒಳಗೆ ಪದಗಳು ಮೂಡುವಂತೆ. ಚೆನ್ನಾಗಿತ್ತು ಆ ಆಟ. ಮಕ್ಕಳು ಆಟವಾಡುತ್ತಲೇ ಪದ್ಯಗಳನ್ನು ಬರೆಯುತ್ತಿದ್ದರು. ಮನೆಯಲ್ಲಿ ಪುಟ್ಟಿಗೆ ಊಟದ ಸಮಯವಾಗಿತ್ತಾದ್ದರಿಂದ ಅಲ್ಲಿಂದ ಮನಸಿಲ್ಲದೇ ಬೇಗ ಹೊರಟೆ.

ನನಗೆ ಲೈಬ್ರರಿಯಲ್ಲಿ ಒಂದು ಪುಸ್ತಕವೂ ಸಿಕ್ಕಿತು. A Poke in the I: Paul Janeczko ಅವರು ಬರೆದಿರುವ ಈ ಪುಸ್ತದಲ್ಲಿ ಬಹಳಷ್ಟು ಇಂತಹ ಪದ್ಯಗಳಿವೆ. ಎಸ್ಕಿಮೊ ಪೈ ಮತ್ತು ಪೊಪ್ಸಿಕಲ್ ಇವೆರಡು ಐಸ್ ಕ್ರೀಮ್ ನ ಆಕಾರದಲ್ಲಿ ಮೂದಿವೆ. ಬಾತುಕೋಳಿ ಮತ್ತದರ ನೆರಳು ನನಗೆ ತುಂಬಾ ಇಷ್ಟವಾಗಿದ್ದು.

ಹೈಸ್ಕೂಲಿನಲ್ಲಿದ್ದಾಗ ಸಂಸ್ಕೃತದ ಮೇಷ್ಟ್ರು ಸ್ಕೂಲ್ ಎಕ್ಸಿಬಿಶನ್ ಸಮಯದಲ್ಲಿ ನಮ್ಮಿಂದ ಮಾಡಿಸುತ್ತಿದ್ದ ಚಾರ್ಟ್ ಗಳಲ್ಲಿ ಇಂತಹ ಹಲವು ಡಿಸೈನಿನ ಕವಿತೆಗಳು ಇದ್ದವು. ಆದರೆ ಸದ್ಯಕ್ಕೆ ಅವ್ಯಾವು ನೆನಪಿಗೆ ಬರ್ತಾಯಿಲ್ಲ:(

ಗೂಗಲ್ ದೇವರ ಹತ್ರ ಸಿಕ್ಕದ್ದು ಏನಿದೆ ಹೇಳಿ, ಹೆಚ್ಚಿನ ವಿವರ ಹುಡುಕುತ್ತಾ ಕುಳಿತೆ.

ಅಲ್ಲದೇ ಅಲೆಮಾರಿ ಎಂಬುವವರು ಇಂತಹದೇ ಒಂದು ಪ್ರಯತ್ನವನ್ನು ಮಾಡಿ ಜೊತೆಗೆ ಇಂತಹ ಕವಿತೆಗಳ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಯನ್ನೂ ಕೊಟ್ಟಿದ್ದಾರೆ. ಓದಿ ಆನಂದಿಸಿರಿ.

Saturday, June 27, 2009

ನೋಡು ಬಾ ನೋಡು ಬಾ ನಮ್ಮ ತಾತನೂರ !!!

ಅಜ್ಜಿ-ತಾತನ ಊರು ಅಂದ್ರೆ ಎಲ್ಲರಿಗೂ ವಿಶೇಷವಾದ ಪ್ರೀತಿಯಿರುತ್ತೆ. ೩ ವರ್ಷದವಳಿದ್ದಾಲೇ ಅಜ್ಜಿ-ತಾತರನ್ನು ಕಳೆದುಕೊಂಡ ನನಗೆ ನಮ್ಮ್ ತಾತನ ಊರಿನ ಬಗ್ಗೆ ಪ್ರೀತಿ ಹುಟ್ಟಲು ಕಾರಣವೇ ಅಲ್ಲಿರುವ ದೇವಸ್ಥಾನ. ನನ್ನ ತಾತನ (ತಂದೆಯ ತಂದೆ) ಊರು ಮಂಡ್ಯ ಜಿಲ್ಲೆಯಲ್ಲಿರುವ ಹೊಸಹೊಳಲು, ಹೊಯ್ಸಳ ಶೈಲಿಯ ಗುಡಿಯಿರುವ ಊರು. 'ಹೊಳಲು' ಅಂದರೆ ಹಳೆಗನ್ನಡದಲ್ಲಿ ಪಟ್ಟಣವೆಂದು. ಊರಿನಲ್ಲಿರೋ ಶಿಲಾಶಾಸನದ ಪ್ರಕಾರ 1125 ADಯಲ್ಲಿ ವೀರ ಗಂಗನರಸಿಂಹ ಬಲ್ಲಾಳರ ಕಾಲದಲ್ಲಿ ನೊಳಂಬ ಶೆಟ್ಟಿ ಮತ್ತು ನಂದಿನಾಥ ವೀರಭದ್ರದೇವ ಅನ್ನೋರು ಈ ದೇವಸ್ಥಾನವನ್ನು ಕಟ್ಟಿಸಿದ್ದು. ಈ ಊರು ಹಿಂದೆ ಅಗ್ರಹಾರವಾಗಿತ್ತಂತೆ. ಇಲ್ಲಿರುವರೆಲ್ಲ ರೈತಾಪಿ ಹಾಗು ನೇಯ್ಗೆ ಆಧಾರಿತ ಕುಟುಂಬಗಳು.
ಹೊಯ್ಸಲ ತ್ರಿಕೂಟಾಚಲ ಶೈಲಿಯಲ್ಲಿ ನಿರ್ಮಿತವಾಗಿರುವ ಗುಡಿ ಒಂದು ಮೀಟರ್ ನಷ್ಟು ಎತ್ತರದ ಅಡಿಪಾಯದ ಮೇಲೆ ನಿಂತಿದೆ. ಪಶ್ಚಿಮಕ್ಕಿರುವ ಕೂಟವು ಹದಿನಾರು ಮೂಲೆಗಳಿರುವ ನಕ್ಷತ್ರದ ಆಕಾರದಲ್ಲಿದೆ, ಹಾಗು ಇದರ ಶಿಖರ ಮತ್ತು ಕಲಶ ಇಂದಿಗೂ ಭದ್ರವಾಗಿದೆ. ಉತ್ತರ-ದಕ್ಷಿಣದಲ್ಲಿರುವ ಕೂಟಗಳು ಚೌಕಟ್ಟಾಗಿವೆ. ಗುಡಿಗಿರುವುದು ಒಂದೇ ಗೋಪುರ.
ದೇವಸ್ಥಾನದ ಹೊರ ಗೋಡೆಗಳು ಸುಂದರವಾದ ಕೆತ್ತನೆಗಳಿಂದ ಆವೃತವಾಗಿದೆ. ಕೆಳಭಾಗದಲ್ಲಿ ಆನೆಗಳ ಸಾಲುಗಳ ಮದ್ಯೆ ಸಲಗನೊಡನೆ ಹೋರಾಡುತ್ತಿರುವ ವೀರನೊಬ್ಬನ ಕೆತ್ತನೆ. ನಂತರದ ಸಾಲಿನಲ್ಲಿ ರಾಮಾಯಣ, ಮಹಾಭಾರತ, ಭಾಗವತದ ಸನ್ನಿವೇಶಗಳನ್ನು ವರ್ಣಿಸುವ ಕೆತ್ತನೆಗಳು. ಹಂಸಗಳ ಸಾಲೂಯಿದೆ. ಎಲ್ಲಕ್ಕಿಂತ ಅಧ್ಭುತವಾಗಿರೋದು ಮಧ್ಯದ ಸಾಲು. ನಾಟ್ಯ ಗಣಪತಿ, ನಾಟ್ಯ ಸರಸ್ವತಿ, ಮಾಧವ, ಮೋಹಿನಿ, ಪಾರ್ವತಿ, ನರಸಿಂಹ ಮುಂತಾದ ದೇವರುಗಳನ್ನು ಅತಿ ಸುಂದರವಾಗಿ ಬಿತ್ತರಿಸಲಾಗಿದೆ.
ನವರಂಗದಲ್ಲಿರುವ ಕಂಬಗಳು ಸಣ್ಣ ಕುಸುರಿ ಕೆತ್ತನೆಗಳನ್ನೊಳಗೊಂಡಿದೆ. ಇಲ್ಲಿರುವ ಕೆಲವು ಕಂಭಗಳಲ್ಲೂ ಸಂಗೀತ ಹೊಮ್ಮುತ್ತದೆ. ಬೇಲೂರಿನಲ್ಲಿರುವ ಮದನಿಕೆಯನ್ನು ಹೋಲುವ ನಾಟ್ಯ ಭಂಗಿಗಳು ಇಲ್ಲೂ ಇವೆ. ದೇವಸ್ಥಾನದ ಮುಖ್ಯ ದೇವರು ಶ್ರೀಲಕ್ಷ್ಮಿನಾರಾಯಣ ವಿಗ್ರಹವು ಪಶ್ಚಿಮಕೂಟದಲ್ಲಿ ಪ್ರತಿಸ್ಥಾಪಿಸಲಾಗಿದೆ. ಗರ್ಭಗುಡಿಯ ಎದುರಿರುವ ಕಂಭದಲ್ಲಿ ಹೆಬ್ಬರಳಿನ ಅಂಗುಷ್ಟ ಗಾತ್ರದ ಸ್ಟ್ರಾ ನಲ್ಲಿ ಎಳನೀರು ಕುಡಿಯುತ್ತಿರೋ ಆಂಜನೇಯ ವಿಗ್ರಹವಿದೆ. ಬೆಳಕು ಹೆಚ್ಚಿಲ್ಲವಾದ್ದರಿಂದ ಕಾಣೋಲ್ಲ. ಪೂಜಾರಿಯವರನ್ನು ಕೇಳಿದರೆ ದೀಪದ ಬೆಳಕಿನಲ್ಲಿ ತೋರಿಸುವರು.

ನಮ್ಮೂರಿಗೆ ದಾರಿ:
ಮೈಸೂರಿನಿಂದ ಕೇವಲ 53ಕಿ.ಮಿ ದೂರದಲ್ಲಿರೋ ನಮ್ಮೂರಿಗೆ ಬೆಂಗಳೂರು/ ಮೈಸೂರು/ ಹಾಸನ ಎಲ್ಲಾ ಕಡೆಗಳಿಂದಲೂ ಬಸ್ ವ್ಯವಸ್ಥೆಯಿದೆ. ಕೃಷ್ಣರಾಜಪೇಟೆ(ಕೆ.ಆರ್.ಪೇಟೆ) ಅಲ್ಲಿಂದ ೨-೩ ಕಿ.ಮಿ, ಅಲ್ಲಿ ಸುಸಜ್ಜಿತ PWD ಗೆಸ್ಟ್ ಹೌಸ್ ಕೂಡ ಇದೆ.

ನಮ್ಮೂರಿಗೆ ಹೋಗಲು ಬೆಂಗಳೂರು-ಮೈಸೂರ್ ಹೆದ್ದಾರಿಯಲ್ಲಿ ಇನ್ನೇನು ಶ್ರೀರಂಗಪಟ್ಟಣ ಒಂದು ಕಿ.ಮಿ ಇದೆ ಅನ್ನೋವಾಗ ಬಲಗಡೆಗೆ ಒಂದು ತಿರುವು ಸಿಗುತ್ತೆ (ಕೃಷ್ಣರಾಜ ಪೇಟೆ ಅಂತ ಸಣ್ಣದೊಂದು ಬೋರ್ಡ್ ಇದೆ). ಅಲ್ಲಿ ಬಲಕ್ಕೆ ತಿರುಗಿ ನಲವತ್ತು ಕಿಲೋಮೀಟರ್ ಹೋದರೆ ಕೆ.ಆರ್. ಪೇಟೆ ಸಿಗುತ್ತೆ(ಮಾರ್ಗದಲ್ಲಿ ಪಾಂಡವಪುರ ಸಿಗುತ್ತೆ) . ಅಲ್ಲಿ ಸರ್ಕಲ್-ನಲ್ಲಿ ಎಡಕ್ಕೆ ತಿರುಗಿ ಎರಡೂವರೆ ಕಿಮಿ ಬಂದ್ರೆ ಹೊಸಹೊಳಲು ಸಿಗುತ್ತೆ.

ನಮ್ಮೂರಿನ ಬಗ್ಗೆ ವೈಕಿಪೀಡಿಯಾ ಹೀಗೆನ್ನುತ್ತದೆ.

ದೇವಸ್ಥಾನದ ಬಗ್ಗೆ ಸರ್ಕಾರ ನಿರ್ಲಕ್ಷ್ಯ ತೋರಿದೆ. ಇದಕ್ಕೊಂದು ಸರಿಯಾದ ಕಾಂಪೊಂಡ್ ಹಾಕಿದ್ದು ಇತ್ತೀಚೆಗೆ. ನಾನು ಚಿಕ್ಕವಳಿದ್ದಾಗ ಮಕ್ಕಳು ದೇವಸ್ಥಾನದ ಗೋಪುರದ ಮೇಲೆಲ್ಲಾ ಹತ್ತಿ ಬಚ್ಚಿಟ್ಟುಕೊಳ್ಳುವ ಆಟ ಇತ್ಯಾದಿ ಆಡುತ್ತಿದ್ದರು. ಕೆತ್ತನೆಗಳನ್ನು ಕಲ್ಲಿನಿಂದ ಚೆಚ್ಚುತ್ತಿದ್ದರು:(

Thursday, June 11, 2009

ಯಾವ ತಾಯಿಯು ಹಡೆದ ಮಗಳಾದರೇನು - ಬಿಳಿ ಹೆಂಡ್ತಿ

ಎಂ.ಜೆ.ಎಂ. ಪ್ರೊಡಕ್ಷನ್ಸ್ ಅವರ, ಮ.ನ.ಮೂರ್ತಿಯವರ ಕಾದಂಬರಿ ಆಧಾರಿತ ಚಿತ್ರ ’ಬಿಳಿ ಹೆಂಡ್ತಿ’ ಯಲ್ಲಿರೋ ಈ ಹಾಡು ನನ್ನ ನೆಚ್ಚಿನ ಗೀತೆಗಳಲ್ಲೊಂದು.
ಸಾಹಿತ್ಯ : ವಿಜಯನರಸಿಂಹ
ಸಂಗೀತ : ವಿಜಯಭಾಸ್ಕರ್
ಗಾಯನ : ಕಸ್ತೂರಿ ಶಂಕರ್

ಯಾವ ತಾಯಿಯು ಹಡೆದ ಮಗಳಾದರೇನು
ಕನ್ನಡಾಂಬೆಯ ಮಡಿಲ ಹೂವಾದೆ ನೀನು
ಯಾವ ತಾಯಿಯು ಹಡೆದ ಮಗಳಾದರೇನು
ಕನ್ನಡಾಂಬೆಯ ಮಡಿಲ ಹೂವಾದೆ ನೀನು
ಯಾವ ತಾಯಿಯು ಹಡೆದ ಮಗಳಾದರೇನು

ಈ ತಾಯ ಕರುಣೆಯ ತಂಪಿನಲಿ
ಈ ತಾಯ ಕಣ್ಣಿನ ಕಾಂತಿಯಲಿ
ಈ ತಾಯ ಬಂಧನದ ರಕ್ಷೆಯಲ್ಲಿ
ಈ ತಾಯ ಬಂಧನದ ರಕ್ಷೆಯಲ್ಲಿ
ಈ ಮನೆಗೆ ನೀನಾಗು ಕಲ್ಪವಲ್ಲಿ
ಯಾವ ತಾಯಿಯು ಹಡೆದ ಮಗಳಾದರೇನು

ಈ ಮನೆಯ ಭಾಗ್ಯದ ಬಾಗಿಲಲ್ಲಿ
ಈ ಮನೆಯ ಧರ್ಮದ ದೀಪದಲ್ಲಿ
ಈ ಮನೆಯ ಪ್ರೀತಿಯ ಗೀತೆಯಲ್ಲಿ
ಈ ಮನೆಯ ಪ್ರೀತಿಯ ಗೀತೆಯಲ್ಲಿ
ಈ ಮನೆಗೆ ನೀನಾಗು ಕಲ್ಪವಲ್ಲಿ
ಯಾವ ತಾಯಿಯು ಹಡೆದ ಮಗಳಾದರೇನು

ಈ ಬಾಳ ಪೂಜೆಯ ರಾಶಿಯಲ್ಲಿ
ಈ ಬಾಳ ಹಾದಿಯ ಸಂಗಮದಲ್ಲಿ
ಈ ಬಾಳ ಹಾಡಿನ ಪಲ್ಲವಿಯಲ್ಲಿ
ಈ ಮನೆಗೆ ನೀನಾಗು ಕಲ್ಪವಲ್ಲಿ
ಯಾವ ತಾಯಿಯು ಹಡೆದ ಮಗಳಾದರೇನು
ಕನ್ನಡಾಂಬೆಯ ಮಡಿಲ ಹೂವಾದೆ ನೀನು
ಯಾವ ತಾಯಿಯು ಹಡೆದ ಮಗಳಾದರೇನು


Saturday, June 6, 2009

ನಾಲಗೆ ತಿರುಚು (ಟಂಗ್ ಟ್ವಿಸ್ಟರ್) !

ಮೊನ್ನೆ ಗೆಳೆಯರು ಬಂದಿದ್ರು. ಊಟದ ನಂತರ ನಮ್ಮ್ ಪುಟ್ಟಿ ಮಲಗಿ ಬಿಟ್ಟಿದ್ರಿಂದ ಬಂದಿದ್ದ ಗೆಳೆಯರ ಮಗಳೊಂದಿಗೆ ನಾನೇ ಆಡಬೇಕಾಯ್ತು. ಅವಳೂ ಅದೂ ಇದೂ ಹಾಡುಗಳನ್ನು ಹೇಳುತ್ತಾ ಕುಣಿಯುತ್ತಾ ಕೊನೆಗೆ ಇದನ್ನ ಫಾಸ್ಟ್ ಆಗಿ ಹೇಳಿ ನೋಡೋಣ ಅಂತ " ಬೆಟ್ಟಿ ಬಾಟ್ ಅ ಬಿಟ್ ಆಫ್ ಬಟರ್, ಬಟ್ ದ ಬಟರ್ ವಾಸ್ ಬಿಟ್ಟರ್" ನಾಲಗೆ ತಿರುಚೊಂದು (ಟಂಗ್ ಟ್ವಿಸ್ಟರ್) ಹೇಳಿದ್ಲು. ಅದನ್ನ ಹೇಳಲೋಗಿ ಅವಳೊಂದಿಗೆ ನಾವೂ ಸ್ವಲ್ಪ ಬ್ ಬ್ಬ್ ಬ್ ಅಂತೆಲ್ಲ ಬೊಬ್ಬೆ ಹಾಕಿ ನಕ್ಕಿದ್ದು ಆಯ್ತು.

ಅವರೆಲ್ಲ ಮನೆ ಸೇರಿದ ಮೇಲೆ ನನಗೆ ನಮ್ಮ ಕನ್ನಡದ ನಾಲಗೆ ತಿರುಚುಗಳ ನೆನಪಾಯಿತು. ಕನ್ನಡದ ಕೆಲವು ನಾಲಗೆ ತಿರಚುಗಳು ಮಾತ್ರ ನನಗೆ ಗೊತ್ತಿದ್ದವು. ಸರಿ ಅಮ್ಮನಿಗೆ ಒಂದು ಫೋನ್ ಮಾಡಿ ಅವರಿಂದ ಇನ್ನೊಂದಿಷ್ಟನ್ನ ಕಲಿತೆ. ಅವುಗಳ ಪಟ್ಟಿ ಇಲ್ಲಿದೆ.

"ಕಪ್ಪು ಕುಂಕುಮ, ಕೆಂಪು ಕುಂಕುಮ"
"ಕಾಗೆ ಪುಕ್ಕ, ಗುಬ್ಬಿ ಪುಕ್ಕ"

ಮೇಲಿನ ಸಾಲುಗಳು ನೋಡಲು ಸರಳವಾಗಿ ಕಂಡರೂ, ಅದರ ಒಳಗುಟ್ಟು ಗೊತ್ತಾಗೋದು ಅದನ್ನ ನಾವು ವೇಗವಾಗಿ ಹೇಳಲು ಯತ್ನಿಸಿದಾಗ ಮಾತ್ರ.

"ಅವಳರಳಳೆದ ಕೊಳಗದಲಿ ಇವಳರಳಳೆದಳು'


ಅರಳೀಮರಬುಡ ತಳಿರೊಡೆದೆರಡೆಲೆ ಮತ್ತೆರಡೆಲೆ ಹೆಚ್ಚಾಯ್ತು


"ಆಲದಮರಬುಡತಳಿರೊಡೆದೆರೆಡೆಲೆಯಾಯಿತು"


"ತರಿಕೆರೆಕೆರೆ ಏರಿ ಮೇಲೆ ಮೂರು ಕರಿಕುರಿಮರಿ ಮೇಯ್ತಿತ್ತು" ಇದನ್ನ ಹೇಳೋಕೆ ನಾವು ಕಷ್ಟ ಪಡುವಾಗ ’ದೇವರ ದುಡ್ಡ’ ಚಿತ್ರದಲ್ಲಿ ಎಸ್.ಪಿ.ಬಾಲಸುಬ್ರಮಣ್ಯಂ ಅವರು ಎಷ್ಟ್ ಚೆನ್ನಾಗಿ ಹಾಡಿದ್ದಾರೆ ಕೇಳಿ.
"ಯಾಕ್ ಯಕ್ ಚಿಕ್ಕಪ್ಪ ಕಣ್ ಕಣ್ ಬಿಡ್ತಿಯ" ಇದನ್ನು ವೇಗವಾಗಿ ಹೇಳುತ್ತಾ ಹೋದರೆ.. ಚಿಕ್ಕಪ್ಪ.. ಚಿಪ್ಪಕ್ಕ ಆಗಿರುತ್ತಾನೆ..


"ಸಂಪಂಗಪ್ಪನ ಮಗ ಮರಿಸಂಪಂಗಪ್ಪ" ಇದರಲ್ಲೇ ಸ್ವಲ್ಪ ಭಿನ್ನವಾದದ್ದು ಇನ್ನೆರಡು

"ಸಂಪಂಗಪ್ಪನ ಮಗ ಮರಿಸಂಪಂಗಪ್ಪ. ಮರಿಸಂಪಂಗಪ್ಪನ ಅಪ್ಪ ಸಂಪಂಗಪ್ಪ"

ಸಂಪಿಗೆ ಕೆಂಪುಗಂಗಪ್ಪನ ಮಗ ಮರಿಕೆಂಪುಗಂಗಪ್ಪಅನ್ನೋದನ್ನ ಬೇಗಬೇಗ ಹೇಳುತ್ತಾ ಹೋದರೆ ಗಂಗಪ್ಪ ಗಂಗಮ್ಮನಾಗಿ ಬದಲಾಗುತ್ತಾನೆ.


"ಬಂಕಾಪುರದ ಕೆಂಪು ಕುಂಕುಮ ಬಂಕಾಪುರದ ಕೆಂಪು ಕುಂಕುಮ ಬಂಕಾಪುರದ ಕೆಂಪು ಕುಂಕುಮ"

ಜಂಬಗಿ ತೂಕಪ್ಪ ತುಂಬಿದ ತುಪ್ಪದ ತಂಬಿಗಿ ತಂದಾನ'

"ತಾತಪ್ಪ ತುಂಬಿದ ತುಪ್ಪದ ತಂಬಿಗೆ ತಂದಾನ"

"ಕುರುಡು ಕುದುರೆಗೆ ಹುರಿದ ಹುರ್ಕಡ್ಲಿ"


ತಮಿಳಿನಲ್ಲೂ ಇಂಥದೊಂದು ಇದೆಯೆಂದು ಸ್ನೇಹಿತರು ಹೇಳಿದ್ರು: ಇದು ಯಾರ್‍ ತೆಚ್ಚ ಚಟ್ಟೆ, ಎಂಗ ತಾತ ತೆಚ್ಚ ಚಟ್ಟೆ (ಇದು ಯಾರು ಹೊಲಿದ ಅಂಗಿ, ನಮ್ಮ ತಾತ ಹೊಲಿದ ಅಂಗಿ) ಇದನ್ನು ವೇಗವಾಗಿ ಹೇಳುತ್ತಿದ್ದರೆ ಎಲ್ಲೋ ಒಂದು ಕಡೆ ತಾತ ಚತ್ತ’ (ತಾತ ಸತ್ತ) ಅಂತ ಆಗಿಬಿಡುತ್ತೆ.


ಮೇಲಿನ ಸಾಲುಗಳಲ್ಲಿ ಯಾವುದಾದರೂ ಒಂದನ್ನು ವೇಗವಾಗಿ ಹೇಳಲು ಪ್ರಯತ್ನಿಸಿ. ಎರಡು ಅಥವಾ ಮೂರು ಸಾರಿ ವೇಗವಾಗಿ ಹೇಳುವಷ್ಟರಲ್ಲಿ ನಿಮ್ಮ ನಾಲಗೆ ಹೇಗೆ ತೊಡರಿಕೊಳ್ಳುತ್ತೆ ಅಂತ ನೀವೇ ಅನುಭವಿಸಿ, ಆನಂದಿಸಿ! ಈ ನಾಲಗೆ ತಿರುಚುಗಳ ಮೋಜಿನ ಆಟ ಹೇಗಿತ್ತು ಅಂತ ತಪ್ಪದೇ ತಿಳಿಸಿ ಆಯ್ತಾ ;) ಹಾಗೇನೆ ನಿಮಗೆ ಇನ್ನೂ ಹಲವಾರು ಕನ್ನಡದ ನಾಲಗೆ ತಿರುಚುಗಳು ತಿಳಿದಿದ್ದಲ್ಲಿ, ದಯವಿಟ್ಟು ಹಂಚಿಕೊಳ್ಳುತ್ತೀರಾ?


Friday, May 22, 2009

ವಿಸ್ಮಯ ವೃಕ್ಷಗಳು!!!

ಬಾವ್ಬಾಬ್ (Baobab) :

ಕಲ್ಪವೃಕ್ಷ ಎಂದು ಕರೆಸಿ ಕೊಳ್ಳುವ 100 ಅಡಿ ಎತ್ತರ, 35 ಅಡಿ ಸುತ್ತಳತೆ ಬೆಳೆಯುವ ಈ ಮರ ಆಫ್ರಿಕಾ , ಆಸ್ಟ್ರೇಲಿಯಾ ಮತ್ತು ಭಾರತದ ಕೆಲವು ಭಾಗಗಳಲ್ಲಿ ಕಾಣಸಿಗುತ್ತೆ. ಉಬ್ಬಿದ ಅದರ ಬೊಡ್ಡೆಯಲ್ಲಿ ಸುಮಾರು 120,000ಲಿ ನಷ್ಟು ನೀರು ಶೇಖರಿಸಿಟ್ಟುಕೊಂಡು ಬರಬಂದಾಗ ಉಪಯೋಗಿಸಿಕೊಳ್ಳುತ್ತದೆ. ಇದು ಮಡಗ್ಯಾಸ್ಕ

ರ್ ದೇಶದ ರಾಷ್ಟ್ರೀಯ ಮರ. ವರ್ಷದ 9 ತಿಂಗಳು ಇದರಲ್ಲಿ ಎಲೆಗಳೆ ಇರೊಲ್ಲ, ಇದನ್ನು ಆಗ ನೋಡಿದ್ರೆ ಯಾರೊ ಇದನ್ನ ಬುಡ ಸಮೇತ ಕಿತ್ತು ತಲೆಕೆಳಗಾಗಿ ಮತ್ತೆ ನೆಟ್ಟಂತೆ ಕಾಣಿಸುತ್ತೆ. ಕರ್ನಾಟಕದ ಹಾವೇರಿ ಜಿಲ್ಲೆಯ ಸವಣೂರ್ ನಲ್ಲಿ ಬೃಹತ್ ಮರಗಳಿವೆ.

ಈ ಮರಗಳು ಭಾರತದಲ್ಲಿ ಕಣ್ಮರೆಯಾಗುತ್ತಿರುವುದು ನೋವಿನ ವಿಷಯ. ಇದರ ಕುರಿತು ಒಂದು ವಿಡಿಯೋ.

ಅತಿ ದೊಡ್ಡ ಬೊಡ್ಡೆಯುಳ್ಳ ಮರ - El Árbol del Tule

El Árbol del Tule (”ಟ್ಯೂಲ್ ಟ್ರೀ”) ಅತಿ ಅಗಲವಾದ ಸೈಪ್ರೆಸ್ಸ್ ಮರ. ಇದು ಮೆಕ್ಸಿಕೋ ದೇಶದ ಓಕ್ಸಾಕ (Oaxaca) ನಲ್ಲಿದೆ. 190 ಅಡಿ ಎತ್ತರದಲ್ಲಿ ಇದರ ಸುತ್ತರಳತೆ 37ಅಡಿ!! ಜಗತ್ತಿನ ಅತಿ ಅಗಲವಾದ ಮರ ಇದು ಅಂತ ಒಪ್ಪದ ಕೆಲವರು ಇದು ಮೂರು ಪ್ರತ್ಯೆಕ ಮರಗಳು ಒಂದರ ಪಕ್ಕದಲ್ಲೇ ಬೆಳೆದಿವೆ ಅಂತೆಲ್ಲ ವಾದಿಸಿದ್ರು. ಆದ್ರೆ DNA ಅನಾಲಿಸಿಸ್ ನಿಂದ ಒಂದೇ ಮರ ಇಷ್ಟು ದೊಡ್ಡದಾಗಿ ಬೆಳೆದಿದು ಅನ್ನೋದು ಖಚಿತವಾಯ್ತು.


ಜನರೆಲ್ ಶೇರ್ ಮನ್:


ಕ್ಯಾಲಿಫೋರ್ನಿಯಾದಲ್ಲಿ ಬೆಳೆಯುವ ದೈತ್ಯ ಸೆಕ್ವಾಯಿಯಾ ಮರಗಳು ಪ್ರಪಂಚದ ದೊಡ್ಡ ಮರಗಳು (ಪರಿಮಾಣ/ volume ಲೆಖ್ಖದಲ್ಲಿ). ಅದರಲ್ಲಿ ಅತಿ ದೊಡ್ಡದು ಎಂಬ ಖ್ಯಾತಿಗೆ ಒಳಗಾಗಿರೋದು ಸೆಕ್ವಾಯಿಯಾ ನ್ಯಾಶನಲ್ ಪಾರ್ಕ್ ನಲ್ಲಿರೋ ಜೆನರಲ್ ಶೇರ್ ಮನ್ - 275ಅಡಿ ಎತ್ತರ, 52,500 cubic feet (1,486 m³) ಪರಿಮಾಣವಿರೋ ಇದರ ತೂಕ 6000 ಟನ್!!! ಇದು ಸುಮಾರು 2,200 ವರ್ಷಗಳ ಹಿರಿಯ ಮರ.


ಬ್ರಿಸ್ಟಲ್ ಕೋನ್ ಪೈನ್ - ಮೆತುಸೇಲಹ್

ಬೈಬಲ್ ನಲ್ಲಿ ಬರುವ ’ಮೆತುಸೇಲಹ್’ ಎಂಬಾತ 969ವರ್ಷಗಳು ಬದುಕಿದ್ದನಂತೆ!! ಅವನ ಹೆಸರನ್ನೇ ಈಗ ಜಗತ್ತಿನ ಅತಿ ಹಿರಿಯ 4,838 ಹರೆಯದ ಈ ಮರಕ್ಕೆ ಇಡಲಾಗಿದೆ. ಇದು ಕ್ಯಾಲಿಫೋರ್ನಿಯಾದಲ್ಲಿದೆ. 1957ರಲ್ಲಿ ಎಡ್-ಮಂಡ್ ಶೂಲ್-ಮನ್ ಅವರು ಇದರಲ್ಲಿ ಒಂದು ಸಣ್ಣ ರದ್ರ ಕೊರೆದು, ಮರದ ಒಳ ತಿರುಳನ್ನು ತೆಗೆದು ಅದರ ವಯಸನ್ನು ಅಳೆದಿದ್ದರು.

1964ರಲ್ಲಿ ಆಗ ಸ್ನಾತಕೋತ್ತರ ವಿದ್ಯಾರ್ಥಿಯಾದಿದ್ದ ಡೋನಾಲ್ಡ್ ಕರ್ರಿ (Donald R. Currey) ಎಂಬುವವರು "ಪ್ರೋಮೆಥಸ್" ಎಂಬ ಮರದಿಂದ ಸ್ಯಾಂಪಲ್ಸ್ ಅನ್ನು ಕೊರೆದು ತೆಗೆಯುತ್ತಿದ್ದರು. ಆಗ ಅಕಸ್ಮಾತ್ ಅವರ ರಂದ್ರ ಕೊರೆಯುವ ಸಲಕರಣೆ ಮುರಿದು ಒಂದು ಭಾಗ ಮರದ ಒಳಗೇ ಉಳಿಯಿತು. ಇದನ್ನು US ಅರಣ್ಯ ಇಲಾಖೆಗೆ ತಿಳಿಸಿ, ಮರವನ್ನ ಕತ್ತರಿಸಿ ಅದನ್ನು ಪರೀಕ್ಷಿಸಿಸಲು ಅನುಮತಿ ಕೋರಿದರು. ಕಡಿದನಂತರದ ಪರೀಕ್ಷೆಯಿಂದ ಅದರ ವಯಸ್ಸು 5,000 ವರ್ಷಗಳಿಗೂ ಹೆಚ್ಚು ಅಂತ ತಿಳಿಯಿತು. ಜಗತ್ತಿನ ಅತಿ ಹಿರಿಯ ಜೀವಿ ಎನಿಸಿ ಕೊಳ್ಳಬಹುದಿದ್ದ ಆ ಮರ ಅವರ ಅಚಾತುರ್ಯದಿಂದಾಗಿ ಆಗಲೆ ನೆಲಕ್ಕುರುಳಿತ್ತು:(

ಈಗ ಇರುವ ಮೆತುಸೇಲಹ್ ಮರವನ್ನು ಜೋಪಾನ ಮಾಡಬೇಕಾದ್ದು ಎಲ್ಲರ ಕರ್ತವ್ಯ.


ಆಲದ ಮರ:

Largest Banyan Tree

ಹಿಂದಿನ ಕಾಲದಲ್ಲಿ ಇದರ ನೆರಳಿನಲ್ಲಿ ಬನಿಯಾ(ಹಿಂದುವರ್ತಕರು)ಗಳು ತಮ್ಮ ವ್ಯಾಪಾರ ಮಾಡುತ್ತಿದ್ದುದರಿಂದ ಇದನ್ನು ಪ್ರವಾಸಿಗಳು ಬನಿಯಾನ್ ಟ್ರೀ ಎಂದು ಕರೆದರು.ಇದು ಬೃಹತ ಪ್ರಾಮಾಣದ್ದಾಗಿದ್ದು ಅಗಲವಾಗಿ ಹರಡಿರುವ ಕೊಂಬೆಗಳಿಂದ ಕೂಡಿದೆ. ಇದು ಭಾರತದ ರಾಷ್ಟ್ರವೃಕ್ಷ. ಸಂಸ್ಕೃತದಲ್ಲಿ 'ವಟವೃಕ್ಷ 'ಎಂದು ಕರೆಯುತ್ತಾರೆ.

ಇದು ವಿಶಾಲ ಕೊಂಬೆಗಳಿಂದ ಕೂಡಿದ ಮರ. ಈ ಕೊಂಬೆಗಳಿಂದ ಬೀಳಲುಗಳು ಹೊರಟು ನೆಲವನ್ನು ತಾಗಿ ಕಾಂಡಗಳಾಗಿ ಪರಿವರ್ತಿಸುತ್ತವೆ. ಈ ರೀತಿಯಿಂದ ಹಲವು ಎಕರೆ ಪ್ರದೇಶಗಳನ್ನೂ ವ್ಯಾಪಿಸುವುದುಂಟು.

ಕಲ್ಕತ್ತದ ಶಿಬಿಪುರದಲ್ಲಿರುವ 250ವರ್ಷಗಳ ಆಲದ ಮರ ಒಂದೂವರೆ ಎಕರೆಯಷ್ಟು ವಿಸ್ತಾರವಾಗಿದೆ. ಎರಡು ಸಾವಿರಕ್ಕೂ ಹೆಚ್ಚು ಬೇರುಗಳು ಇದಕ್ಕಿವೆ. ಇದರ ವಿಡಿಯೋ ತುಣುಕು ಇಲ್ಲಿದೆ .ಮರಗಳ ಸರ್ಕಸ್:
ಅಕ್ಸೆಲ್ ಎರ್ಲ್ಯಾಂಡ್-ಸನ್(Axel Erlandson) ಅವರು ಮರಗಳಲ್ಲಿ ನಿರ್ಮಿಸುವ ಈ ಅದ್ಭುತಕ್ಕೆ ಅವರಿಟ್ಟ ಹೆಸರು "ಟ್ರೀ ಸರ್ಕಸ್" !! ಹೆಚ್ಚಿನ ವಿವರಗಳು ಇಲ್ಲಿ.

crafted_tree2.jpg

crafted_tree3.jpg

crafted_tree4.jpg

crafted_tree5.jpg

crafted_tree6.jpg

ಈ ಲೇಖನದ ಕ್ರೆಡಿಟ್ ನನ್ನ ಹೇಮಂತ್ ಅವರಿಗೆ ಸೇರಬೇಕು. ಅವರಿಂದ ತಿಳಿದದ್ದು/ ಕಲಿತಾಯಿರೋದು ತುಂಬಾಯಿದೆ. ಅವರು ವೃತ್ತಿಯಲ್ಲಿ ಹಾರ್ಟಿಕಲ್ಚರ್ ಮಾಲಿಕ್ಯುಲಾರ್ ಬಯಾಲಜಿಸ್ಟ್. ಗಿಡಗಳು ಅಂದ್ರೆ ಅವರಿಗೆ ಎಲ್ಲೆಲ್ಲಿದ ಆಸಕ್ತಿ, ಪ್ರೀತಿ:) ಮೊದಲ ಸರ್ತಿ ಅಮೇರಿಕಾಗೆ ಕಾನ್-ಫರೆನ್ಸ್ ಗೆ ಬಂದಿದ್ದಾಗ ಹತ್ತಿರದ ಯಾವುದೇ ಜಾಗಗಳನ್ನು ನೋಡದೇ ಕೇವಲ ಜೊಶುವಾ ಟ್ರೀ ನ್ಯಾಷನಲ್ ಪಾರ್ಕಿಗೆ ಭೇಟ್ಟಿ ಕೊಟ್ಟು ಮನೆಯಲ್ಲಿ ಸೋದರರ ನಗೆಗೆ ತುತ್ತಾಗಿದ್ದರು:( ನನಗೆ ಹೊಸ ವಿಷಯಗಳನ್ನು ಹೇಳೋದಲ್ಲದೆ ಆಗಾಗ್ಗೆ ಅದರ ಬಗ್ಗೆ ಕ್ವಿಜ್ ಕೂಡ ಮಾಡ್ತಾರೆ! ಅವರು ಹೇಳಿಕೊಟ್ಟ ಪಾಠದ ಪ್ರತಿಫಲವೇ ಈ ಲೇಖನ.

ಚಿತ್ರ ಕೃಪೆ: ಅಂತರ್ಜಾಲ