Pages

Friday, November 14, 2008

ಮಕ್ಕಳ ದಿನಾಚರಣೆ ಶುಭಾಶಯಗಳು !!


ಜವಹರ್ ಲಾಲ್ ನೆಹರೂ ಅವರಿಗೆ ಮಕ್ಕಳೆಂದರೆ ಬಲು ಇಷ್ಟವಂತೆ. ಮಕ್ಕಳು ಕೊಟ್ಟ ಗುಲಾಬಿಯನ್ನು ತಮ್ಮ ಕೋಟಿನ ಜೇಬಿಗೆ ಸೇರಿಸಿ ಸಂತೋಷಪಡುತ್ತಿದ್ದರಂತೆ. ಮಕ್ಕಳು ಮತ್ತು ಹೂವುಗಳನ್ನು ಹೋಲಿಸುತ್ತಿದ್ದ ನೆಹರು, "ಮಕ್ಕಳೆಂದರೆ ಹೋದೋಟದಲ್ಲಿರುವ ಸುಂದರ ಮೊಗ್ಗುಗಳು" ಎನ್ನುತ್ತಿದ್ದರಂತೆ. ಪುಟ್ಟ ಮಕ್ಕಳ ಕುರಿತು ಕಾಳಜಿ ವಹಿಸಬೇಕು, ಮಕ್ಕಳನ್ನು ಪ್ರೀತಿಯಿಂದ ಪೋಷಿಸಬೇಕು, ಮಕ್ಕಳೇ ದೇಶದ ಭವಿಷ್ಯ ಹಾಗೂ ನಾಳಿನ ನಾಗರಿಕರು ಎಂಬುದು ನೆಹರು ಅಭಿಮತ. ಮಕ್ಕಳ ಮೇಲಿದ್ದ ಇವರ ಅಕ್ಕರೆ, ಪ್ರೀತಿಯ ಸಂಕೇತವಾಗಿ ಅವರ ಜನ್ಮದಿನವನ್ನು ದೇಶದಾದ್ಯಂತ ಮಕ್ಕಳ ದಿನಾಚರಣೆ ಎಂದು ಆಚರಿಸಲಾಗುತ್ತದೆ. ಚಾಚಾ ನೆಹರೂ ಅವರು ಮಕ್ಕಳಿಗಾಗಿ ಬರೆದ ಒಂದು ಪತ್ರ ಎಲ್ಲೋ ಓದಿದ್ದೆ, ಅದನ್ನು ನನ್ನ ಕಂಪ್ಯುಟರ್’ನಲ್ಲಿ ಉಳಿಸಿಕೊಂಡಿದ್ದೆ. ಇಲ್ಲಿದೆ ಆ ಪತ್ರ :


ಡಿಸೆಂಬರ್ 03, 1949

ಮುದ್ದು ಪುಟಾಣಿಗಳೇ,
ನಗೆ ಮಕ್ಕಳೊಂದಿಗೆ ಒಡನಾಟ ಬಲು ಇಷ್ಟ. ಮಕ್ಕಳೊಂದಿಗೆ ಮಾತುಕತೆ, ನಗುನಗುತ್ತಾ ಸಮಯ ಕಳೆಯೋದು, ಆಟವಾಡುವುದು... ನನಗಿಷ್ಟ. ಮಕ್ಕಳ ಜೊತೆಗಿದ್ದರೆ ಒಂದು ಕ್ಷಣ ನಾನೊಬ್ಬ ಇಳಿವಯಸ್ಸಿನವ ಎಂಬುದನ್ನು ಮರೆತೇಬಿಡುತ್ತೇನೆ, ನನ್ನ ಬಾಲ್ಯದ ದಿನಗಳು ಎಂದೋ ಕಳೆದಿವೆ ಎನ್ನುವ ಪರಿವೆಯೂ ಇರುವುದಿಲ್ಲ. ಆದರೆ ಪ್ರೀತಿಯಿಂದ ನಿಮಗೆ ಪತ್ರ ಬರೆಯಲು ಪೆನ್ನು ಹಿಡಿದಾಗ ನನ್ನ ವಯಸ್ಸು, ನಿಮ್ಮ-ನನ್ನ ನಡುವಿನ ಅಂತರ ಹಾಗೂ ನಮ್ಮ ನಡುವಿನ ನಿಜ ವ್ಯತ್ಯಾಸ ಮರೆಯಲಾಗದು. ಕಿರಿಯರಿಗೆ ಉಪದೇಶ ಮತ್ತು ಸಲಹೆ ನೀಡುವುದೇ ಹಿರಿಯರ ಅಭ್ಯಾಸ. ನನಗಿನ್ನೂ ನೆನಪಿದೆ, ಪುಟ್ಟ ಹುಡುಗನಾಗಿದ್ದಾಗ ನನಗೂ ಇಂಥ ಉಪದೇಶಗಳೆಂದರೆ ಕಿರಿಕಿರಿ. ಈಗ ನನ್ನ ಮಾತುಗಳೂ ನಿಮಗೆ ಹಿಡಿಸದೆ ಇರಬಹುದು.ಇತರರ ಮಾತುಗಳನ್ನು ಆಲಿಸಿದಾಗಲೆಲ್ಲಾ ನಾನೊಬ್ಬ ಜ್ಞಾನಿ, ಬುದ್ಧಿವಂತ ಹಾಗೂ ಪ್ರಮುಖ ವ್ಯಕ್ತಿಯಾಗುವ ಕನಸು ಕಾಣುತ್ತಿದ್ದೆ. ಆದರೆ ನನ್ನ ನಿಜ ವ್ಯಕ್ತಿತ್ವದ ಕಡೆ ದೃಷ್ಟಿ ಹರಿಸಿದಾಗೆಲ್ಲಾ ಆ ಬಗ್ಗೆ ಅನುಮಾನ ಮೂಡುತ್ತಿತ್ತು. ಅನೇಕ ಬಾರಿ ಜನರು ಎಷ್ಟೇ ಶ್ರೇಷ್ಠ ಜ್ಞಾನಿಗಳಾಗಿರಲಿ, ತಮ್ಮ ಬಗ್ಗೆ ಕೊಚ್ಚಿಕೊಳ್ಳುವುದಿಲ್ಲ. ಹಾಗಿದ್ದಲ್ಲಿ ನಾನೇನು ಬರೆಯಲಿ? ಸುತ್ತ ಮುತ್ತಲಿನ ಈ ಅಭೂತಪೂರ್ವ ಸೌಂದರ್ಯ... ಎಲ್ಲವನ್ನೂ ಮರೆಯುವ ನಾವು ಅಥವಾ ನಮ್ಮ ಹಿರಿಯರು ನಮ್ಮದೇ ವಾದ-ವಿವಾದ ಮಂಡಿಸುತ್ತಾ ಕಾಲಹರಣ ಮಾಡಿ ಸ್ವಂತಿಕೆಯನ್ನೇ ಕಳೆದುಕೊಳ್ಳುತ್ತಿದ್ದೇವೆ. ಕಚೇರಿಯಲ್ಲಿ ಕುಳಿತು ಮಹತ್ಕಾರ್ಯ ಮಾಡುತ್ತಿದ್ದೇವೆ ಎಂದುಕೊಳ್ಳುತ್ತೇವೆ.ಆದರೆ ನನಗೆ ಗೊತ್ತು. ನೀವೆಲ್ಲಾ ತುಂಬಾ ಬುದ್ಧಿವಂತರು, ನಿಮ್ಮ ಕಣ್ಣು ಮತ್ತು ಕಿವಿಗಳು ಜಗತ್ತಿನ ಸೌಂದರ್ಯ ಮತ್ತು ಸುತ್ತಲಿನ ಬದುಕನ್ನು ಆಸ್ವಾದಿಸಲು ತೆರೆದೇ ಇರುತ್ತದೆ. ಒಂದು ಸುಂದರ ಹೂವನ್ನು ಅದರ ನಾಮಧೆಯದಿಂದ ಗುರುತಿಸುವಿರಾ ಅಥವಾ ಹಕ್ಕಿಯೊಂದು ಹಾಡುತ್ತಿದ್ದರೆ ಆ ಹಕ್ಕಿಯ ಹೆಸರು ಹೇಳಬಲ್ಲಿರಾ? ಅವುಗಳೊಂದಿಗೆ ಅದೆಷ್ಟು ಸರಳವಾಗಿ ಸ್ನೇಹ ಬೆಳೆಸುತ್ತೀರಿ. ಅಥವಾ ಒಂದಿಷ್ಟು ಪ್ರೀತಿಯಿಂದ ಬಳಿ ಸರಿದರೆ ಸಾಕು ಪ್ರಕೃತಿಯ ಪ್ರತಿ ಜೀವ-ಜಂತುಗಳೂ ನಿಮ್ಮ ಒಡನಾಡಿಯಾಗಬಲ್ಲವು. ಆದರೆ ನಾವು ಹಿರಿಯರು ನಮ್ಮದೇ ಸೀಮಿತ ವಲಯದೊಳಗೆ ಬದುಕು ಸವೆಸುತ್ತೇವೆ. ಹಿರಿಯರು ತಮ್ಮ-ತಮ್ಮೊಳಗೆ ಧರ್ಮ, ಜಾತಿ, ವರ್ಣ, ಪಕ್ಷ, ರಾಷ್ಟ್ರ, ಪ್ರಾಂತ್ಯ, ಭಾಷೆ, ಪದ್ಧತಿ ಮತ್ತು ಬಡವ-ಬಲ್ಲಿದರೆಂಬ ತಡೆಗೋಡೆಗಳನ್ನು ನಿರ್ಮಿಸಿರುತ್ತಾರೆ. ಸ್ವತಃ ತಾವೇ ನಿರ್ಮಿಸಿದ ಕಾರಾಗೃಹದಲ್ಲಿ ಬದುಕು ಸವೆಸುತ್ತಾರೆ. ಅದೃಷ್ಟವಶಾತ್ ಮುಗ್ಧ ಮಕ್ಕಳು ಈ ತಡೆಗೋಡೆಗಳ ಬಗ್ಗೆ ಹೆಚ್ಚೇನೂ ಅರಿಯಲಾರರು. ಅವರು ಜೊತೆಯಾಗಿ ಆಡುತ್ತಾರೆ, ಜೊತೆಯಾಗಿ ನಲಿಯುತ್ತಾರೆ ಮತ್ತು ಕೆಲಸ ಮಾಡುತ್ತಾರೆ. ಆದರೆ ಮಕ್ಕಳು ಬೆಳೆದು ಪ್ರೌಢಾವಸ್ಥೆಗೆ ತಲುಪಿದ ಮೇಲೆ ಈ ತಡೆಗೋಡೆಗಳ ಬಗ್ಗೆ ಕಲಿಯಲಾರಂಭಿಸುತ್ತಾರೆ. ನನಗೊಂದು ನಂಬಿಕೆಯಿದೆ; ನೀವು ಬೆಳೆಯಲು ಇನ್ನೂ ತುಂಬಾ ವರ್ಷಗಳೇ ಬೇಕಾಗಬಹುದು ಎಂಬ ವಿಶ್ವಾಸವದು.ಪುಟಾಣಿಗಳೇ, ನಮ್ಮ-ನಿಮ್ಮ ನಡುವೆ ಒಬ್ಬ ಮಹಾನ್ ವ್ಯಕ್ತಿ ಇದ್ದಾರೆಂಬುವುದು ನಿಮಗೂ ಗೊತ್ತಲ್ಲ? ಅವರೇ ರಾಷ್ಟ್ರಪಿತ ಮಹಾತ್ಮಗಾಂಧಿ. ಇವರನ್ನು ನಾವು ಪ್ರೀತಿಯಿಂದ ಬಾಪೂಜಿ ಎನ್ನುತ್ತೇವೆ. ಅವರೊಬ್ಬ ಮಹಾನ್ ಜ್ಞಾನಿ. ಆದರೆ ಅವರೆಂದೂ ತಮ್ಮ ಬುದ್ದಿವಂತಿಕೆಯನ್ನು ಪ್ರದರ್ಶಿಸಿಲ್ಲ. ಬಲು ಸರಳ ಮತ್ತು ಮಕ್ಕಳಂಥ ಮುಗ್ಧ ಮನಸ್ಸು ಅವರದು. ಮಕ್ಕಳನ್ನು ತುಂಬಾ ಪ್ರೀತಿಸುತ್ತಿದ್ದರು. ಎಷ್ಟೋ ಬಾರಿ, ನಗುನಗುತ್ತಲೇ ಜಗತ್ತನ್ನು ಎದುರಿಸಲು ಸಿದ್ಧರಾಗಿ ಎಂಬ ನೀತಿಪಾಠವನ್ನು ನಮಗೆ ಬೋಧಿಸುತ್ತಿದ್ದರು.ನಮ್ಮದು ಬೃಹತ್ ರಾಷ್ಟ್ರ, ನಾವೆಲ್ಲರೂ ದೇಶ ಸೇವೆ ಮಾಡಬೇಕು. ನಮ್ಮಲ್ಲಿ ಪ್ರತಿಯೊಬ್ಬರೂ ದೇಶಕ್ಕಾಗಿ ಅಳಿಲು ಸೇವೆ ಮಾಡಿದರೂ ಸಾಕು, ಭಾರತ ಉಜ್ವಲವಾಗಿ ಬೆಳಗಲಿದೆ. ನನ್ನ ಪಕ್ಕದಲ್ಲೇ ಕುಳಿತು ನನ್ನೆಲ್ಲಾ ಮಾತುಗಳನ್ನು ಪ್ರೀತಿಯಿಂದ ಆಲಿಸುತ್ತಿದ್ದೀರೆಂದು ಭಾವಿಸಿ, ಪತ್ರದ ಮೂಲಕ ನನ್ನೆಲ್ಲಾ ಪ್ರೀತಿಯನ್ನು ಅರುಹುತ್ತಿದ್ದೇನೆ. ನಾನು ಹೇಳಬೇಕೆಂದು ಬಯಸಿದ್ದಕ್ಕಿಂತ ಹೆಚ್ಚು ವಿಷಯಗಳನ್ನೇ ಈ ಪತ್ರದಲ್ಲಿ ತುರುಕಿದ್ದೇನೆ.
ಪ್ರೀತಿಯಿಂದ,

ಜವಹರಲಾಲ್ ನೆಹರು


ಅಂದ ಹಾಗೆ ನವೆಂಬರ್ ಇಪ್ಪತ್ತರಂದು ವಿಶ್ವ ಮಕ್ಕಳ ದಿನಾಚರಣೆ. ನಮ್ಮ ಭಾರತದಲ್ಲಿ ಮಾತ್ರ ನವೆಂಬರ್ ಹದಿನಾಲ್ಕು. ಈ ತಿಂಗಳು ಜಗತ್ತಿನ ಎಲ್ಲಾ ಮಕ್ಕಳಿಗೂ ಮಕ್ಕಳಹಬ್ಬದ ಶುಭಾಶಯಗಳು. ಕಲ್ಮಶವರಿಯದ ಮುಗ್ಧ ಮಕ್ಕಳ ನಗು ನಮಗೆಲ್ಲಾ ಚೇತನ. ಈ ನಗು ಮಕ್ಕಳ ಮೊಗದಲ್ಲಿ ಸದಾ ಇರಲಿ. :)

Wednesday, November 5, 2008

ಸಾವು ಕೊನೆಯಲ್ಲ ...

ಕೋಣೆಯ ತುಂಬಾ ಮೌನ ಆವರಿಸಿತ್ತು. ಸವಿತಾಳ ಅಳುವಿನ ಸಣ್ಣದನಿಯೊಂದೇ ಆಗಾಗ್ಗೆ ಆ ಮೌನ ಮುರಿಯುತ್ತಿತ್ತು. ಹಾಸಿಗೆಯ ಮೇಲೆ ಮಲಗಿದ್ದ ತನ್ನ ಕಂದನನ್ನು ನೋಡಿ ಮತ್ತೆ ಮತ್ತೆ ಬಿಕ್ಕಳಿಸುತ್ತಿದ್ದಳು. ತನ್ನ ಮುದ್ದು ಅವಿನಾಶ್ ಇನ್ನಿಲ್ಲವೆಂದು ಡಾಕ್ಟರ್ ಆಗಷ್ಟೆ ಹೇಳಿದ ಮಾತನ್ನು ನಂಬಲು ಅವಳಿಂದ ಆಗುತ್ತಿಲ್ಲ. "ಆ ದೇವರು ಇಷ್ಟು ಕ್ರೂರಿ ಆಗಲು ಹೇಗೆ ಸಾಧ್ಯ? ಈ ಎಳೆ ಕಂದಮ್ಮನಿಗೆ ಈ ಘೋರ ಶಿಕ್ಷೆ ಏಕೆ?" ಎಂದೆಲ್ಲಾ ಯೋಚಿಸುತ್ತಾ ಮಲಗಿದ್ದ ಮಗನ ದೇಹ ದಿಟ್ಟಿಸಿ ಕಣ್ಣೀರೊರೆಸಿಕೊಂಡಳು. "ಅವಿ, ನಾ ನಿನ್ನ ಸಾಯೋಕೆ ಬಿಡೋಲ್ಲ ಪುಟ್ಟು, ಯಾರ್ ಏನೇ ಹೇಳಿದರೂ ಸರಿ ನೀನು ಸಾಯುವುದಿಲ್ಲ" ಸವಿತ ಬಡಬಡಿಸುತ್ತಾ ಹಾಸಿಗೆಯ ತುದಿಯಲ್ಲಿ ಕುಸಿದಳು.

ಉಲ್ಲಾಸ್ ಜೊತೆ ಮಾತನಾಡುತ್ತಾ ಕೋಣೆಗೆ ಬಂದರು ಪ್ರಖ್ಯಾತ ಮಕ್ಕಳ ವೈದ್ಯ ಡಾ. ಹರ್ಷ. ಸವಿತಾಳನ್ನು ಕಂಡು ಉಲ್ಲಾಸ್ "ಡಾ. ಹರ್ಷ ನಿನ್ನೊಂದಿಗೆ ಮಾತಾಡಲು ಬಂದಿದ್ದಾರೆ ಸವಿತ, ನೋಡಿಲ್ಲಿ" ಎಂದವಳನ್ನು ಎತ್ತಿ ಕೂರಿಸಿದನು. ಡಾಕ್ಟರ್’ನ್ನು ಹತಾಶಳಾಗಿ ನೋಡುತ್ತಾ "ಏನು, ಇನ್ನೇನಿದೆ ನೀವು ಹೇಳಲಿಕ್ಕೆ?" ಅಂದಳು. "ನೋಡಿ ಸವಿತ ಅವರೆ, ನಿಮ್ಮ ದುಃಖ ನನಗೆ ಅರ್ಥವಾಗುತ್ತದೆ. ನಮ್ಮ ಪ್ರಯತ್ನ ನಾವು ಮಾಡಿದ್ವಿ, ಈಗ ನಾವು ಅವಿನಾಶ್’ನ ದೇಹವನ್ನು ತಗೊಂಡು ಹೋಗಬೇಕು". ಅವರ ಮಾತಿನ್ನೂ ಪೂರ್ತಿಗೊಳ್ಳುವ ಮುಂಚೆಯೇ "ಇಲ್ಲಾಆಆಆಆ" ಎಂದು ಅರಚುತ್ತಾ ಎದ್ದ ಸವಿತ ಮಗನ ದೇಹವನ್ನು ಬಿಗಿದಪ್ಪಿ "ನೀವ್ಯಾರೂ ನನ್ನ ಕಂದನನ್ನು ಮುಟ್ಟಬೇಡಿ, ಯಾರಿಗೂ ಅವನನ್ನು ಮುಟ್ಟಲು ನಾ ಬಿಡೊಲ್ಲ. ಅವನು ನನ್ನ ಬಿಟ್ಟು ಎಲ್ಲೂ ಹೋಗಿಲ್ಲ, ಇಲ್ಲೇ ಇದ್ದಾನೆ". "ಸಮಾಧಾನ ಮಾಡಿಕೊಳ್ಳಿ ಸವಿತ, ನಿಜ ಸ್ಥಿತಿಯನ್ನು ಅರಿಯಿರಿ. ಅವಿನಾಶ್ ಇನ್ನಿಲ್ಲ ಅನ್ನೋದು ನಿಜ ". ಡಾಕ್ಟರ್ ಮಾತು ಕೇಳಿ ಸವಿತ "ಇನ್ನೊಂದು ಸ್ವಲ್ಪ ಹೊತ್ತು ನನ್ನ ಮಗನೊಂದಿಗೆ ಇರಲು ಬಿಡಿ" ಎಂದು ಅಂಗಲಾಚಿದಳು. "ನಿಮ್ಮ ಮಾತು, ನೋವು ನನಗೆ ಅರ್ಥವಾಗುತ್ತದೆ ಸವಿತ ಅವರೆ, ಆದರೆ ಈಗ ನೀವು ಯೊಚಿಸಬೇಕಾದ್ದ ಮತ್ತೊಂದು ಮುಖ್ಯ ವಿಚಾರವಿದೆ. ನೀವು ಇಷ್ಟಪಟ್ಟಲ್ಲಿ ಅವಿನಾಶ್ ಅಂತಹ ಹಲವು ಮಕ್ಕಳಿಗೆ ನೀವು ಸಹಾಯ ಮಾಡಬಹುದು". ಅವರ ಮಾತು ಅರ್ಥವಾಗದೆ ಅವರನ್ನು ಪ್ರಶ್ನಾರ್ಥವಾಗಿ ದಿಟ್ಟಿಸುತ್ತಾ ಕುಳಿತಳು. "ನಮ್ಮಲ್ಲಿ ಅವಿನಾಶ್’ನಂತೆಯೇ ಹೃದಯ ತೊಂದರೆಯಿಂದ ಬಳಲುತ್ತಿರುವ ಹಲವು ಮಕ್ಕಳಿದ್ದಾರೆ. ಅವರಿಗೆ ಸುಸ್ಥಿತಿಯಲ್ಲಿರುವ ಅಂಗಾಗಗಳು ಬೇಕು. ಹಾಗೆಯೆ ಅಂಧ ಮಕ್ಕಳಿಗೆ ನಿಮ್ಮ ಅವಿನಾಶನ ಕಣ್ಣುಗಳು ಬೆಳಕಾಗಬಲ್ಲವು". "ಇಲ್ಲ, ನನ್ನ ಮುದ್ದು ಕಂದನಿಗೆ ನೀವ್ಯಾರು ಇನ್ನೂ ಹಿಂಸೆ ಮಾಡಬೇಡಿ. ಅವನು ಇನ್ನಾದರೂ ನೆಮ್ಮದಿಯಿಂದಯಿರಲಿ. ಅವನ ಹತ್ತಿರ ನಾನ್ಯಾರನ್ನೂ ಬಿಡೋಲ್ಲ" ಉಲ್ಲಾಸ್ ಸವಿತಾಳನ್ನು ಅಪ್ಪಿಹಿಡಿದು ಸಾಂತ್ವಾನಗೊಳಿಸಲು ಪ್ರಯತ್ನಿಸುತ್ತಾ ಅವಳನ್ನು ಕೋಣೆಯಿಂದ ಹೊರಗೆ ಕರೆದೊಯ್ದ, ಹಾಗೆಯೆ ಡಾಕ್ಟರ್’ಗೆ ಕಣ್ಣ್’ಸನ್ನೆಯಲ್ಲಿ ತನ್ನ ಸಮ್ಮತಿ ತಿಳಿಸಿದ.

ಆಫೀಸ್’ನಿಂದ ಬಂದ ಉಲ್ಲಾಸ್ ಕೈಯಲ್ಲಿ ಅವಿನಾಶನ ಫೋಟೋ ಹಿಡಿದು ಅಳುತ್ತಾ ಸೋಫಾದ ಮೇಲೆ ಮಲಗಿದ್ದ ಸವಿತಾಳನ್ನು ಕಂಡು "ಸವಿತ, ಸಾಕು ಮಾಡು ಈ ಅಳು, ಆಗಲೇ ೨ ವಾರ ಆಯಿತು. ಬಾ ಆಸ್ಪತ್ರೆಗೆ ಹೋಗಿ ಬರೋಣ" ಅನ್ನುತ್ತಾ ಅವಳನ್ನು ಎಬ್ಬಿಸಿದನು. "ಈಗೇನಿದೆ ಅಲ್ಲಿ ನಮಗೆ ಕೆಲಸ? ನಾನಲ್ಲಿಗೆ ಬರೋಲ್ಲ, ಅವರೆಲ್ಲ ನನ್ನ ಅವಿಯನ್ನು ನನ್ನಿಂದ ದೂರ ಮಾಡಿದರು. ಕೊನೆಗೆ ಅವನಿಗೆ ಚಿತ್ರಹಿಂಸೆ ಕೊಟ್ಟರು." "ನೀನಲ್ಲಿ ನೋಡಬೇಕಾದ್ದು ಇದೆ ಸವಿತ, ನನ್ನ ಮಾತು ನಂಬು, ನನಗೋಸ್ಕರ ಆದ್ರೂ ಬಾ" ಎನ್ನುತ್ತಾ ಅವಳನ್ನು ಹೊರಡಿಸಿದ.

ಆಸ್ಪತ್ರೆಯಲ್ಲಿ ಸೀದಾ ಡಾ. ಹರ್ಷರ ಕೋಣೆಗೆ ನಡೆದರು. ಇವರ ಬರುವಿಕೆಯನ್ನೆ ಎದುರು ನೋಡುತ್ತಿವರಂತೆ ಹರ್ಷ "ಬನ್ನಿ, ನಿಮಗಾಗಿಯೇ ಕಾಯುತ್ತಿದ್ದೆ. ಹೇಗಿದ್ದೀರಾ ಸವಿತ? ಬನ್ನಿ ಹೋಗೋಣ" ಅನ್ನುತ್ತಾ ಲಿಫ್ಟ್’ನಲ್ಲಿ ಮೂರನೆ ಮಹಡಿಗೆ ಕರೆದೊಯ್ದರು. ಏನಾಗುತ್ತಿದೆ ಅಂತ ತಿಳಿಯದೆ ಸವಿತ "ನಾವೆಲ್ಲಿಗೆ ಹೋಗುತ್ತಿದ್ದೇವೆ ಉಲ್ಲಾಸ್" ಎಂದು ಪ್ರಸ್ನಿಸಿದಳು, ಅಷ್ಟರಲ್ಲಿ ಅವರು ಪೋಸ್ಟ್-ಆಪರೇಟೀವ್ ವಾರ್ಡಿಗೆ ಬಂದಿದ್ದರು. ಡಾ.ಹರ್ಷರನ್ನು ನೋಡುತ್ತಿದ್ದಂತೆಯೇ ನರ್ಸ್ ಮಕ್ಕಳನ್ನು ಅವರ ಬಳಿ ಕರೆತಂದಳು. ಸವಿತಾಳಿಗೆ ಇದೇನು ಅರ್ಥವಾಗುತ್ತಿಲ್ಲ, "ಈ ಮಕ್ಕಳು ಯಾರು? ನನ್ನ ಬಳಿ ಏಕೆ ಕರೆತಂದರು, ಇದೆಲ್ಲ ಏನು" ಅಂತ ಉಲ್ಲಾಸನ ಕಡೆ ತಿರುಗಿದಾಗ "ಆ ಹುಡುಗಿಯ ಕಣ್ಣು ನೋಡು ಸವಿತ" ಅಂದನು. ಗೊಂದಲಗೊಂಡ ಸವಿತ ಉಲ್ಲಾಸ್ ತೋರಿಸಿದ ಹುಡುಗಿಯತ್ತ ಮತ್ತೊಮ್ಮೆ ನೋಡಿದಳು. ಇದು ಸಾಧ್ಯನಾ? ಅದೇ ಸುಂದರ ಕಣ್ಣುಗಳು, ತನ್ನ ಅವಿನಾಶನ ಕಣ್ಣುಗಳು. ತನಗೇ ಗೊತ್ತಿಲ್ಲದಂತೆ "ಅವಿ....." ಎಂದು ಕಿರುಚುತ್ತಾ ಆ ಹುಡುಗಿಯನ್ನು ಬಿಗಿದಪ್ಪಿ ಮುದ್ದಾಡಿದಳು. ಅಷ್ಟರಲ್ಲಿ ಉಲ್ಲಾಸ್ ಮತ್ತೊಬ್ಬ ಹುಡುಗನನ್ನು ಸವಿತಳ ಬಳಿ ಕರೆತಂದನು. ಸವಿತ ಆ ಮಗುವನ್ನು ಅಪ್ಪುತ್ತಿದ್ದಂತೆಯೇ ಹೃದಯ ಬಡಿತ ಲಬ್-ಡಬ್ ಲಬ್-ಡಬ್ ಕೇಳಿಸಲಾರಂಭಿಸಿತು ಆದರದು ಅವಳ ಕಿವಿಗೆ ಅಮ್ಮ ಅಮ್ಮ ಎಂದು ಕೇಳಿಸಿತು.ಚಕಿತಳಾದ ಸವಿತ ಉಲ್ಲಾಸನ ಮುಖ ನೋಡಿದಳು. "ಹೌದು ಸವಿತ, ನಮ್ಮ ಅವಿಯ ಹೃದಯವದು. ನಾವು ಒಬ್ಬ ಮಗನನ್ನು ಕಳೆದುಕೊಂಡು ದುಃಖಿಸುತ್ತಿದ್ದೆವು. ಈಗ ನೋಡು ನಮ್ಮ ಅವಿ ಇವರೆಲ್ಲರಲ್ಲಿ ಬದುಕಿದ್ದಾನೆ." ತನ್ನ ಕಣ್ಣೀರೊರೆಸಿಕೊಳ್ಳುತ್ತಾ ಸವಿತ "ಹೌದು ನನ್ನ ಅವಿ ಇಲ್ಲೇ ಇದ್ದಾನೆ, ಇನ್ನು ನಾನೇಕೆ ಅಳಲಿ?" ಎನ್ನುತ್ತಾ ಆ ಮಕ್ಕಳನ್ನು ಮತ್ತೊಮ್ಮೆ ಬಿಗಿದಪ್ಪಿದಳು. :)