Pages

Friday, October 31, 2008

ಕನ್ನಡ ಈಗ ಶಾಸ್ತ್ರೀಯ ಭಾಷೆಗಳ ಪಟ್ಟಿಗೆ !!!
ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು !!!
ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನ ನೀಡಿರುವ ವಿಷಯ ಕೇಂದ್ರ ಸರ್ಕಾರ ಇಂದು ಸಂಜೆ ಪ್ರಕಟಿಸಿದೆ. ಇಲ್ಲಿಯವರೆಗೆ ಸಂಸ್ಕೃತ ಮತ್ತು ತಮಿಳು ಭಾಷೆಗೆ ಸೀಮಿತವಾಗಿದ್ದ ಆ ಗೌರವ, ಈಗ ಕನ್ನಡ ಮತ್ತು ತೆಲುಗು ಭಾಷೆಗಳಿಗೆ ಲಭಿಸಿದೆ. ಈಗಾಗಲೇ ಕರ್ನಾಟಕದಾದ್ಯಂತ ಸಂಭ್ರಮದ ವಾತಾವರಣ ಶುರುವಾಗಿದೆ. 53ನೇ ರಾಜ್ಯೋತ್ಸವ ಆಚರಿಸುತ್ತಿರುವ ಕನ್ನಡಿಗರಿಗೆ ಹೆಚ್ಚಿನ ಸಂತೋಷವಾಗಿದೆ, ಎಲ್ಲೆಲ್ಲೂ ಹಬ್ಬದ ವಾತಾವರಣ ಕಂಡಿದೆಯಂತೆ.
ಸುದ್ಧಿ ಓದಿ ಬಹಳ ಸಂತಸವಾಯಿತು. ಶಾಸ್ತ್ರೀಯ ಭಾಷೆ ಅಂದ್ರೆ ಏನು ಮತ್ತಿತರ ವಿವರಗಳಿಗೆ ಇಲ್ಲಿ ಮತ್ತು ಇಲ್ಲಿ ನೋಡಿ.
ಹಾಗೆಯೆ ಮನದಲ್ಲಿ ಅನೇಕ ಪ್ರಶ್ನೆಗಳು ಎದ್ದವು... ಇದರಿಂದ ಭಾಷೆಗೆ ಏನು ಪ್ರಯೋಜನ? ಕರ್ನಾಟಕದಲ್ಲಿ ಮರೆಯಾಗುತ್ತಿರುವ ಕನ್ನಡದ ಉಳಿವಿಕೆ ಇದರಿಂದ ಸಾಧ್ಯವೇ? ಇದು ಕೇವಲ ರಾಜಕೀಯ ವ್ಯಕ್ತಿಗಳು ಕೆಲವು ರಾಜ್ಯದ ಜನರನ್ನು ಸಂತೃಪ್ತಿ ಪಡಿಸಲು/ ಓಟ್ ಗಳಿಸಲು ಹೂಡಿದ ತಂತ್ರವೇ?


Monday, October 27, 2008

ಬಣ್ಣ ಬಣ್ಣದ ದೀಪಗಳು !!!

ಗಣೇಶನ ಮಾಡಲು ತಂದಿದ್ದ ಕ್ಲೇ ಇನ್ನೂ ಸ್ವಲ್ಪ ಉಳಿದಿತ್ತು. ಅದರಲ್ಲಿ ದೀಪಾವಳಿಗೆ ದೀಪಗಳನ್ನು ಮಾಡೋಣ ಅಂತ ಪ್ರಯತ್ನಿಸಿದ್ದೆ. ಆದರೆ ಕೆಲಸಕ್ಕೆ ಹೊರಡುವ ಆತುರದಲ್ಲಿ ಹೊರಗೆ ಒಣಗಲು ಇಟ್ಟಿದ್ದ ದೀಪಗಳನ್ನು ಅಲ್ಲೇ ಬಿಟ್ಟು, ಅವು ಮಳೆಗೆ ನೆಂದು ತೊಪ್ಪೆಯಾದವು :( ಕೊನೆಗೆ ಎಂದಿನಂತೆ Tealight Candlesನ ಹಚ್ಚಿ ಹಬ್ಬ ಮಾಡೋಣ ಅಂತ ಸುಮ್ಮನಾದೆ.
ಆರ್ಕುಟ್’ನಲ್ಲಿ ನನ್ನ ಕೆಲವು ಗೆಳತಿಯರು ಮಾಡಿದ ಈ ಸುಂದರ ದೀಪಗಳನ್ನು ನೋಡಿ.


ಪೆನ್ಸಿಲ್ ಸ್ಕೆಚ್ ಪ್ರವೀಣೆ ಉಮಾ ಅವರ ಕೈಯಲ್ಲಿ ಮೂಡಿದ ಸುಂದರ ಬಣ್ಣಬಣ್ಣದ ಪ್ಲೇ ಡೋ ದೀಪಗಳು.

Sunday, October 26, 2008

ದೀಪಾವಳಿ ಹಾಡುಗಳು !!!

ಸಂಜೆ ದೀಪ ಹಚ್ಚುವಾಗ ಅಮ್ಮ ಹೇಳ್ತಾಯಿದ್ದ ’ರಂಜನಿ’ ರಾಗದಲ್ಲಿರುವ ಈ ಹಾಡು ನನಗೆ ಬಹಳ ಇಷ್ಟ.
ದೀಪಲಕ್ಷ್ಮಿ ದೇವಿ ಜಯ ದೀಪಲಕ್ಷ್ಮಿ
ದೀಪಲಕ್ಷ್ಮಿ ದೇವಿ ಜಯ ದೀಪಲಕ್ಷ್ಮಿ//ಪ//
ಶುಕ್ರವಾರದಲ್ಲಿ ನಿನ್ನ/ ಕೀರ್ತನೆಯಗೈವೆ
ಭಕ್ತಿಯಿಂದ ಬೇಡುವೆ ಮುಕ್ತಿ ಸಂಪದವ ನೀಡೆ //ದೀಪ//ನಿನ್ನನ್ನೆ ಪಾಡುವೆ ನಿನ್ನನ್ನೆ ಪೊಗಳುವೆ
ನಿನ್ನ ಚರಣ್ದಲ್ಲಿ ಶಿರವನಿಟ್ಟು ನಾ ನಮಿಸುವೆ//೨//
ನಿನ್ನ ಕೃಪೆ ಕಟಾಕ್ಷವು ನನ್ನದಾಗಿ ಬೆಳಗುತಿರಲಿ//ದೀಪ//ಅಜ್ಞಾನದ ಕತ್ತಲಲ್ಲಿ ಬಳಲಿ ಬೆಂಡಾಗಿಹೆನು
ಸುಜ್ಞಾನದ ಬೆಳಕು ನೀಡಿ ಜೀವನ ಹಸನಾಗಿಸು//೨//
ಅಭಯವ ನೀಡು ಬಾ/ ಕರುಣೆಯ ತೋರು ಬಾ
ಮನಸು/ ನಿನ್ನಲ್ಲಿ/ ನಿಲ್ಲಿಸು/ ತಾಯೇ //ದೀಪ//

ನಮ್ಮ ಕನ್ನಡ ಚಲನಚಿತ್ರಗಳಲ್ಲಿ ಕೆಲವು ದೀಪಾವಳಿ ಹಾಡುಗಳಿವೆ. ಅವುಗಳಲ್ಲಿ ಡಾ. ರಾಜ್ ಮತ್ತು ಹರಿಣಿ ಅಭಿನಯದ "ನಂದಾ ದೀಪ" ಚಿತ್ರದಲ್ಲಿರುವ "ನಾಡಿನಂದಾ ಈ ದೀಪಾವಳಿ ಬಂತು.. ...." ಹಾಡು ನನಗೆ ಬಹಳ ಇಷ್ಟ. ಅಂತರ್ಜಾಲದಲ್ಲಿ ಬಹಳಷ್ಟು ಹುಡುಕಿದರೂ ಈ ಹಾಡು ನನಗೆ ಸಿಗಲಿಲ್ಲ. ನಿಮ್ಮಲ್ಲಿ ಇದ್ದರೆ ನನಗೆ ದಯವಿಟ್ಟು ಈ-ಮೇಲ್ ಮಾಡಿ.

೨೦೦೩ರಲ್ಲಿ ಬಿಡುಗಡೆಯಾದ ’ನಂಜುಂಡಿ’ ಚಲನಚಿತ್ರದಲ್ಲಿರುವ ಈ ಅರ್ಥಪೂರ್ಣ ಹಾಡು ನೋಡಿ . ಸಾಹಿತ್ಯ ಮತ್ತು ಸಂಗೀತ ಹಂಸಲೇಖ ಅವರಿಂದ. ಹಾಡಿರುವವರು ಮಧು ಬಾಲಕೃಷ್ಣ ಮತ್ತು ನಂದಿತ್.

ದೀಪದಿಂದ ದೀಪವ

ಹಚ್ಚಬೇಕು ಮಾನವ

ಪ್ರೀತಿಯಿಂದ ಪ್ರೀತಿ ಹಂಚಲು

ಮನಸಿನಿಂದ ಮನಸನು

ಬೆಳಗಬೇಕು ಮಾನವ

ಮೇಲು ಕೀಳು ಭೇದ ನಿಲ್ಲಲು

ಭೇದವಿಲ್ಲ ಬೆಂಕಿಗೆ

ದ್ವೇಷವಿಲ್ಲ ಬೆಳಕಿಗೆ

ನೀ ತಿಳಿಯೋ ಪ

ಆಸೆ ಹಿಂದೆ ದುಃಖವೆಂದರು

ರಾತ್ರಿ ಹಿಂದೆ ಹಗಲು ಎಂದರು

ದ್ವೇಷವೆಂದು ಹೊರೆ ಎಂದರು

ಹಬ್ಬವದಕೆ ಹೆಗಲು ಎಂದರು

ಎರಡು ಮುಖದ

ನಮ್ಮ ಜನುಮದ ವೇಷಾವಳಿತಿಳಿದು

ಹಾಲ್ಬೆಳಕ ಕುಡಿವುದೇ ದೀಪಾವಳಿ ೧

ಮಣ್ಣಿನಿಂದ ಹಣತೆಯಾದರೆ

ಬೀಜದಿಂದ ಎಣ್ಣೆಯಾಯಿತು

ಅರಳೆಯಿಂದ ಬತ್ತಿಯಾದರೆ

ಸುಡುವ ಬೆಂಕಿ ಜ್ಯೋತಿಯಾಯಿತು

ನಂದಿಸುವುದು ತುಂಬ ಸುಲಭವೋ

ಹೇ ಮಾನವ

ಆನಂದಿಸುವುದು ತುಂಬ ಕಠಿಣವೋ

ಹೇ ದಾನವ೨

ದೀಪಾವಳಿ ಹಬ್ಬದ ಶುಭಾಶಯಗಳು !!!

ಬಂದಿದೆ ಬೆಳಕಿನ ಹಬ್ಬ ದೀಪಾವಳಿ
ಎಲ್ಲೆಲ್ಲೂ ಪಟಾಕಿಗಳ ಹಾವಳಿ !!

ಶುಭವ ತರಲಿ ಈ ದೀಪಾವಳಿ
ನಮ್ಮನಿಮ್ಮೆಲ್ಲರ ಬಾಳಿನಲಿ !!!

ದೀಪಾವಳಿ ಬೆಳಕಿನ ಹಬ್ಬ, ಕತ್ತಲಿನಿಂದ ಬೆಳಕಿನೆಡೆಗೆ ಒಯ್ಯುವ ಹಬ್ಬ, ಅಜ್ಞಾನದಿಂದ ಸುಜ್ಞಾನದತ್ತ ಕರೆದೊಯ್ಯುವ ಹಬ್ಬ, ಅಂಧಕಾರ ಕಳೆಯುವ, ಪ್ರೀತಿ-ವಿಶ್ವಾಸದ ಹಬ್ಬ ದೀಪಾವಳಿ.

ದೀಪಾವಳಿ ಅಂದೊಡನೆ ಮನಸಿಗೆ ಬರುವುದು ಸಾಲುಸಾಲು ದೀಪಗಳು, ಢಂ ಢಂ ಪಟಾಕಿಗಳು, ಬಣ್ಣ ಬಣ್ಣದ ರಂಗೋಲಿ, ಬಗೆಬಗೆಯ ಸಿಹಿ ತಿಂಡಿಗಳು. ಹೊಸ ಬಟ್ಟೆ ಹಾಕಿಕೊಂಡು, ಅಣ್ಣ ತಮ್ಮಂದಿರ ಜೊತೆ ಪೈಪೋಟಿಯ ಮೇಲೆ ಪಟಾಕಿ ಹಚ್ಚೋದು.. ಅದರಲ್ಲೂ ಬೆಳಗ್ಗೆ ಎಲ್ಲರಿಗಿಂತಾ ಮೊದಲು ನಾನೇ ಪಾಟಾಕಿ ಸಿಡಿಸಬೇಕೆಂದು ಬೇಗ ಎದ್ದು, ಸ್ನಾನ ಮುಗಿಸಿ, ಅಮ್ಮ "ಇಷ್ಟು ಬೇಗ ಪಟಾಕಿ ಸಿಡಿಸಿ ಗಲಾಟೆ ಮಾಡಬೇಡ" ಎಂದರೂ ಕೇಳದೇ "ಇರಲಿ ಬಿಡಮ್ಮ ಮಲಗಿರೋರಿಗೆ ಅಲರಾಮ್ ಆಗುತ್ತೆ" ಅಂತ ಹೇಳಿ ರೋಡಿಗೆ ಓಡ್ತಾಯಿದ್ದೆ :D

ಹಬ್ಬದ ಬಗೆಗಿನ ಹೆಚ್ಚಿನ ಮಾಹಿತಿಗೆ ಇಲ್ಲಿ ನೋಡಿ.