Pages

Showing posts with label ಕಥೆ. Show all posts
Showing posts with label ಕಥೆ. Show all posts

Wednesday, November 5, 2008

ಸಾವು ಕೊನೆಯಲ್ಲ ...

ಕೋಣೆಯ ತುಂಬಾ ಮೌನ ಆವರಿಸಿತ್ತು. ಸವಿತಾಳ ಅಳುವಿನ ಸಣ್ಣದನಿಯೊಂದೇ ಆಗಾಗ್ಗೆ ಆ ಮೌನ ಮುರಿಯುತ್ತಿತ್ತು. ಹಾಸಿಗೆಯ ಮೇಲೆ ಮಲಗಿದ್ದ ತನ್ನ ಕಂದನನ್ನು ನೋಡಿ ಮತ್ತೆ ಮತ್ತೆ ಬಿಕ್ಕಳಿಸುತ್ತಿದ್ದಳು. ತನ್ನ ಮುದ್ದು ಅವಿನಾಶ್ ಇನ್ನಿಲ್ಲವೆಂದು ಡಾಕ್ಟರ್ ಆಗಷ್ಟೆ ಹೇಳಿದ ಮಾತನ್ನು ನಂಬಲು ಅವಳಿಂದ ಆಗುತ್ತಿಲ್ಲ. "ಆ ದೇವರು ಇಷ್ಟು ಕ್ರೂರಿ ಆಗಲು ಹೇಗೆ ಸಾಧ್ಯ? ಈ ಎಳೆ ಕಂದಮ್ಮನಿಗೆ ಈ ಘೋರ ಶಿಕ್ಷೆ ಏಕೆ?" ಎಂದೆಲ್ಲಾ ಯೋಚಿಸುತ್ತಾ ಮಲಗಿದ್ದ ಮಗನ ದೇಹ ದಿಟ್ಟಿಸಿ ಕಣ್ಣೀರೊರೆಸಿಕೊಂಡಳು. "ಅವಿ, ನಾ ನಿನ್ನ ಸಾಯೋಕೆ ಬಿಡೋಲ್ಲ ಪುಟ್ಟು, ಯಾರ್ ಏನೇ ಹೇಳಿದರೂ ಸರಿ ನೀನು ಸಾಯುವುದಿಲ್ಲ" ಸವಿತ ಬಡಬಡಿಸುತ್ತಾ ಹಾಸಿಗೆಯ ತುದಿಯಲ್ಲಿ ಕುಸಿದಳು.





ಉಲ್ಲಾಸ್ ಜೊತೆ ಮಾತನಾಡುತ್ತಾ ಕೋಣೆಗೆ ಬಂದರು ಪ್ರಖ್ಯಾತ ಮಕ್ಕಳ ವೈದ್ಯ ಡಾ. ಹರ್ಷ. ಸವಿತಾಳನ್ನು ಕಂಡು ಉಲ್ಲಾಸ್ "ಡಾ. ಹರ್ಷ ನಿನ್ನೊಂದಿಗೆ ಮಾತಾಡಲು ಬಂದಿದ್ದಾರೆ ಸವಿತ, ನೋಡಿಲ್ಲಿ" ಎಂದವಳನ್ನು ಎತ್ತಿ ಕೂರಿಸಿದನು. ಡಾಕ್ಟರ್’ನ್ನು ಹತಾಶಳಾಗಿ ನೋಡುತ್ತಾ "ಏನು, ಇನ್ನೇನಿದೆ ನೀವು ಹೇಳಲಿಕ್ಕೆ?" ಅಂದಳು. "ನೋಡಿ ಸವಿತ ಅವರೆ, ನಿಮ್ಮ ದುಃಖ ನನಗೆ ಅರ್ಥವಾಗುತ್ತದೆ. ನಮ್ಮ ಪ್ರಯತ್ನ ನಾವು ಮಾಡಿದ್ವಿ, ಈಗ ನಾವು ಅವಿನಾಶ್’ನ ದೇಹವನ್ನು ತಗೊಂಡು ಹೋಗಬೇಕು". ಅವರ ಮಾತಿನ್ನೂ ಪೂರ್ತಿಗೊಳ್ಳುವ ಮುಂಚೆಯೇ "ಇಲ್ಲಾಆಆಆಆ" ಎಂದು ಅರಚುತ್ತಾ ಎದ್ದ ಸವಿತ ಮಗನ ದೇಹವನ್ನು ಬಿಗಿದಪ್ಪಿ "ನೀವ್ಯಾರೂ ನನ್ನ ಕಂದನನ್ನು ಮುಟ್ಟಬೇಡಿ, ಯಾರಿಗೂ ಅವನನ್ನು ಮುಟ್ಟಲು ನಾ ಬಿಡೊಲ್ಲ. ಅವನು ನನ್ನ ಬಿಟ್ಟು ಎಲ್ಲೂ ಹೋಗಿಲ್ಲ, ಇಲ್ಲೇ ಇದ್ದಾನೆ". "ಸಮಾಧಾನ ಮಾಡಿಕೊಳ್ಳಿ ಸವಿತ, ನಿಜ ಸ್ಥಿತಿಯನ್ನು ಅರಿಯಿರಿ. ಅವಿನಾಶ್ ಇನ್ನಿಲ್ಲ ಅನ್ನೋದು ನಿಜ ". ಡಾಕ್ಟರ್ ಮಾತು ಕೇಳಿ ಸವಿತ "ಇನ್ನೊಂದು ಸ್ವಲ್ಪ ಹೊತ್ತು ನನ್ನ ಮಗನೊಂದಿಗೆ ಇರಲು ಬಿಡಿ" ಎಂದು ಅಂಗಲಾಚಿದಳು. "ನಿಮ್ಮ ಮಾತು, ನೋವು ನನಗೆ ಅರ್ಥವಾಗುತ್ತದೆ ಸವಿತ ಅವರೆ, ಆದರೆ ಈಗ ನೀವು ಯೊಚಿಸಬೇಕಾದ್ದ ಮತ್ತೊಂದು ಮುಖ್ಯ ವಿಚಾರವಿದೆ. ನೀವು ಇಷ್ಟಪಟ್ಟಲ್ಲಿ ಅವಿನಾಶ್ ಅಂತಹ ಹಲವು ಮಕ್ಕಳಿಗೆ ನೀವು ಸಹಾಯ ಮಾಡಬಹುದು". ಅವರ ಮಾತು ಅರ್ಥವಾಗದೆ ಅವರನ್ನು ಪ್ರಶ್ನಾರ್ಥವಾಗಿ ದಿಟ್ಟಿಸುತ್ತಾ ಕುಳಿತಳು. "ನಮ್ಮಲ್ಲಿ ಅವಿನಾಶ್’ನಂತೆಯೇ ಹೃದಯ ತೊಂದರೆಯಿಂದ ಬಳಲುತ್ತಿರುವ ಹಲವು ಮಕ್ಕಳಿದ್ದಾರೆ. ಅವರಿಗೆ ಸುಸ್ಥಿತಿಯಲ್ಲಿರುವ ಅಂಗಾಗಗಳು ಬೇಕು. ಹಾಗೆಯೆ ಅಂಧ ಮಕ್ಕಳಿಗೆ ನಿಮ್ಮ ಅವಿನಾಶನ ಕಣ್ಣುಗಳು ಬೆಳಕಾಗಬಲ್ಲವು". "ಇಲ್ಲ, ನನ್ನ ಮುದ್ದು ಕಂದನಿಗೆ ನೀವ್ಯಾರು ಇನ್ನೂ ಹಿಂಸೆ ಮಾಡಬೇಡಿ. ಅವನು ಇನ್ನಾದರೂ ನೆಮ್ಮದಿಯಿಂದಯಿರಲಿ. ಅವನ ಹತ್ತಿರ ನಾನ್ಯಾರನ್ನೂ ಬಿಡೋಲ್ಲ" ಉಲ್ಲಾಸ್ ಸವಿತಾಳನ್ನು ಅಪ್ಪಿಹಿಡಿದು ಸಾಂತ್ವಾನಗೊಳಿಸಲು ಪ್ರಯತ್ನಿಸುತ್ತಾ ಅವಳನ್ನು ಕೋಣೆಯಿಂದ ಹೊರಗೆ ಕರೆದೊಯ್ದ, ಹಾಗೆಯೆ ಡಾಕ್ಟರ್’ಗೆ ಕಣ್ಣ್’ಸನ್ನೆಯಲ್ಲಿ ತನ್ನ ಸಮ್ಮತಿ ತಿಳಿಸಿದ.





ಆಫೀಸ್’ನಿಂದ ಬಂದ ಉಲ್ಲಾಸ್ ಕೈಯಲ್ಲಿ ಅವಿನಾಶನ ಫೋಟೋ ಹಿಡಿದು ಅಳುತ್ತಾ ಸೋಫಾದ ಮೇಲೆ ಮಲಗಿದ್ದ ಸವಿತಾಳನ್ನು ಕಂಡು "ಸವಿತ, ಸಾಕು ಮಾಡು ಈ ಅಳು, ಆಗಲೇ ೨ ವಾರ ಆಯಿತು. ಬಾ ಆಸ್ಪತ್ರೆಗೆ ಹೋಗಿ ಬರೋಣ" ಅನ್ನುತ್ತಾ ಅವಳನ್ನು ಎಬ್ಬಿಸಿದನು. "ಈಗೇನಿದೆ ಅಲ್ಲಿ ನಮಗೆ ಕೆಲಸ? ನಾನಲ್ಲಿಗೆ ಬರೋಲ್ಲ, ಅವರೆಲ್ಲ ನನ್ನ ಅವಿಯನ್ನು ನನ್ನಿಂದ ದೂರ ಮಾಡಿದರು. ಕೊನೆಗೆ ಅವನಿಗೆ ಚಿತ್ರಹಿಂಸೆ ಕೊಟ್ಟರು." "ನೀನಲ್ಲಿ ನೋಡಬೇಕಾದ್ದು ಇದೆ ಸವಿತ, ನನ್ನ ಮಾತು ನಂಬು, ನನಗೋಸ್ಕರ ಆದ್ರೂ ಬಾ" ಎನ್ನುತ್ತಾ ಅವಳನ್ನು ಹೊರಡಿಸಿದ.





ಆಸ್ಪತ್ರೆಯಲ್ಲಿ ಸೀದಾ ಡಾ. ಹರ್ಷರ ಕೋಣೆಗೆ ನಡೆದರು. ಇವರ ಬರುವಿಕೆಯನ್ನೆ ಎದುರು ನೋಡುತ್ತಿವರಂತೆ ಹರ್ಷ "ಬನ್ನಿ, ನಿಮಗಾಗಿಯೇ ಕಾಯುತ್ತಿದ್ದೆ. ಹೇಗಿದ್ದೀರಾ ಸವಿತ? ಬನ್ನಿ ಹೋಗೋಣ" ಅನ್ನುತ್ತಾ ಲಿಫ್ಟ್’ನಲ್ಲಿ ಮೂರನೆ ಮಹಡಿಗೆ ಕರೆದೊಯ್ದರು. ಏನಾಗುತ್ತಿದೆ ಅಂತ ತಿಳಿಯದೆ ಸವಿತ "ನಾವೆಲ್ಲಿಗೆ ಹೋಗುತ್ತಿದ್ದೇವೆ ಉಲ್ಲಾಸ್" ಎಂದು ಪ್ರಸ್ನಿಸಿದಳು, ಅಷ್ಟರಲ್ಲಿ ಅವರು ಪೋಸ್ಟ್-ಆಪರೇಟೀವ್ ವಾರ್ಡಿಗೆ ಬಂದಿದ್ದರು. ಡಾ.ಹರ್ಷರನ್ನು ನೋಡುತ್ತಿದ್ದಂತೆಯೇ ನರ್ಸ್ ಮಕ್ಕಳನ್ನು ಅವರ ಬಳಿ ಕರೆತಂದಳು. ಸವಿತಾಳಿಗೆ ಇದೇನು ಅರ್ಥವಾಗುತ್ತಿಲ್ಲ, "ಈ ಮಕ್ಕಳು ಯಾರು? ನನ್ನ ಬಳಿ ಏಕೆ ಕರೆತಂದರು, ಇದೆಲ್ಲ ಏನು" ಅಂತ ಉಲ್ಲಾಸನ ಕಡೆ ತಿರುಗಿದಾಗ "ಆ ಹುಡುಗಿಯ ಕಣ್ಣು ನೋಡು ಸವಿತ" ಅಂದನು. ಗೊಂದಲಗೊಂಡ ಸವಿತ ಉಲ್ಲಾಸ್ ತೋರಿಸಿದ ಹುಡುಗಿಯತ್ತ ಮತ್ತೊಮ್ಮೆ ನೋಡಿದಳು. ಇದು ಸಾಧ್ಯನಾ? ಅದೇ ಸುಂದರ ಕಣ್ಣುಗಳು, ತನ್ನ ಅವಿನಾಶನ ಕಣ್ಣುಗಳು. ತನಗೇ ಗೊತ್ತಿಲ್ಲದಂತೆ "ಅವಿ....." ಎಂದು ಕಿರುಚುತ್ತಾ ಆ ಹುಡುಗಿಯನ್ನು ಬಿಗಿದಪ್ಪಿ ಮುದ್ದಾಡಿದಳು. ಅಷ್ಟರಲ್ಲಿ ಉಲ್ಲಾಸ್ ಮತ್ತೊಬ್ಬ ಹುಡುಗನನ್ನು ಸವಿತಳ ಬಳಿ ಕರೆತಂದನು. ಸವಿತ ಆ ಮಗುವನ್ನು ಅಪ್ಪುತ್ತಿದ್ದಂತೆಯೇ ಹೃದಯ ಬಡಿತ ಲಬ್-ಡಬ್ ಲಬ್-ಡಬ್ ಕೇಳಿಸಲಾರಂಭಿಸಿತು ಆದರದು ಅವಳ ಕಿವಿಗೆ ಅಮ್ಮ ಅಮ್ಮ ಎಂದು ಕೇಳಿಸಿತು.



ಚಕಿತಳಾದ ಸವಿತ ಉಲ್ಲಾಸನ ಮುಖ ನೋಡಿದಳು. "ಹೌದು ಸವಿತ, ನಮ್ಮ ಅವಿಯ ಹೃದಯವದು. ನಾವು ಒಬ್ಬ ಮಗನನ್ನು ಕಳೆದುಕೊಂಡು ದುಃಖಿಸುತ್ತಿದ್ದೆವು. ಈಗ ನೋಡು ನಮ್ಮ ಅವಿ ಇವರೆಲ್ಲರಲ್ಲಿ ಬದುಕಿದ್ದಾನೆ." ತನ್ನ ಕಣ್ಣೀರೊರೆಸಿಕೊಳ್ಳುತ್ತಾ ಸವಿತ "ಹೌದು ನನ್ನ ಅವಿ ಇಲ್ಲೇ ಇದ್ದಾನೆ, ಇನ್ನು ನಾನೇಕೆ ಅಳಲಿ?" ಎನ್ನುತ್ತಾ ಆ ಮಕ್ಕಳನ್ನು ಮತ್ತೊಮ್ಮೆ ಬಿಗಿದಪ್ಪಿದಳು. :)

Thursday, September 25, 2008

ನಾಮಕರಣ ವಿಧಾನದ ಹಿನ್ನಲೆ !!!

ಮಗುವಿಗೆ ಹೆಸರಿಡುವ ಹಬ್ಬವೇ ನಾಮಕರಣ. ವ್ಯವಹಾರ ನಾಮದ ಜೊತೆಗೆ ಕೆಲವರು ಐದು ಹೆಸರುಗಳನ್ನು ಇಡುತ್ತಾರೆ. ಮಗುವಿನ ರಕ್ಷಣೆಯ ದೃಷ್ಟಿಯಿಂದ ದೇವರ ಹೆಸರು, ಹಿರಿಯರ ನೆನಪಿಗಾಗಿ ಒಂದು, ನಕ್ಷತ್ರನಾಮ, ಮಾಸ ನಾಮ ಇತ್ಯಾದಿ... ಗಂಡು ಮಗುವಿಗೆ ಆದರೆ ೨,೪,೬ ಅಕ್ಷರಗಳ(even number) ಹೆಣ್ಣು ಮಗುವಿಗೆ ೩,೫,೭ (odd number) ಅಕ್ಷರಗಳ ಹೆಸರು ಇಡಬೇಕಂತೆ. ತಂದೆಯು ತನ್ನ ಬೆರಳುಂಗುರದಿಂದ ಅಕ್ಕಿಯ ಮೇಲೆ ಮಗುವಿನ ಹೆಸರು ಬರೆದು, ನಂತರ ಮಗುವಿನ ಕಿವಿಯಲ್ಲಿ ಹೆಸರು ಹೇಳಿ, ಉಂಗುರವನ್ನು ಜೇನುತುಪ್ಪದಲ್ಲಿ ಹಾಕಿ ಅದನ್ನು ಮಗುವಿಗೆ ನೆಕ್ಕಿಸುತ್ತಾರೆ. ಈ ಎಲ್ಲದರ ಹಿಂದಿನ ಕಾರಣವೇನಿರ ಬಹುದು ಅಂತಾ ಯೋಚಿಸಿದಾಗ ನನಗೆ ಅನಿಸಿದ್ದು ಇವು. ಈ ಕಾರಣಗಳು ಸರಿಯಿಲ್ಲದಿರಲೂ ಬಹುದು, ನಿಮಗೆ ಹೆಚ್ಚಿನ ಮಾಹಿತಿಯಿದ್ದರೆ ಹಂಚಿಕೊಳ್ಳಿ.

ಹೆಸರು ಬರೆಯಲು ತಂದೆಯು ತನ್ನ ಉಂಗುರವನ್ನೇ ಏಕೆ ಬಳಸುತ್ತಾನೆ?
ಚಿನ್ನಕ್ಕೆ ಲೋಪವಿಲ್ಲ, ಅದು ಶ್ರೇಷ್ಠವಾದದ್ದು. ಹೆಸರಿಡುವ ಕೆಲಸ ತಂದೆಯದ್ದಾದ್ದರಿಂದ ಅವನು ತೊಡುವ ಒಡವೆಗಳಲ್ಲಿ ಉಂಗುರ ಬಹಳ ಸುಲುಭವಾಗಿ ತೆಗೆದು ಹಾಕಬಹುದು. ಅಲ್ಲದೆ ಬೇರೆ ಆಭರಗಳಿಗೆ ಹೋಲಿಸಿದರೆ ಉಂಗುರದಲ್ಲಿ ಬರೆಯುವುದು ಸುಲಭ. ಜೊತೆಗೆ ರೋಮನ್ನರ ನಂಬೆಕೆಯಂತೆ ನಮ್ಮ ಎಡಗೈಯ ೪ನೇ ಬೆರಳಿನಿಂದ ಶುರುವಾಗುವ ರಕ್ತನಾಳವೊಂದು ನೇರ ಹೃದಯ ಸೇರುತ್ತದಂತೆ. ಮಗುವಿನ ಹೆಸರನ್ನು ಬರೆಯಲು ತಂದೆಯು ತನ್ನ ಹೃದಯಕ್ಕೆ ಹತ್ತಿರವಿರುವ ಬೆರಳಿನ ಉಂಗುರವನ್ನು ಬಳಸಿ ಮಗುವಿಗೆ "ನೀನು ನನಗೆ ಬಹಳ ಪ್ರೀತಿಪಾತ್ರನಾದವಳು/ನು" ಅಂತ ಹೇಳುವಂತಿದೆ.


ಅಕ್ಕಿಯ ಮೇಲೆ ಮಗುವಿನ ಹೆಸರು ಬರೆಯಲು ಕಾರಣವೇನು?
ಅಕ್ಕಿಯ ಮೆಲೆ ಬರೆದ ಹೆಸರು ತಟ್ಟೆ ಸ್ವಲ್ಪ ಅಲುಗಾಡಿದರೆ ಅಳಿಸುವುದು, ಹಾಗೆಯೇ ಈ ಪ್ರಪಂಚದಲ್ಲಿ ಯಾವುದೂ ಶಾಶ್ವತವಲ್ಲ ಎಂದು ಮಗುವಿಗೆ ತಿಳಿಸಲು.


ಉಂಗುರವನ್ನು ಜೇನುತುಪ್ಪದಲ್ಲಿ ಹಾಕಿ ಅದನ್ನು ಮಗುವಿಗೆ ನೆಕ್ಕಿಸುವುದು ಏಕೆ?
  • ಜೇನಿನಷ್ಟೇ ಸಿಹಿಯಾದ ಹೆಸರನ್ನು ನಿನಗೆ ಇಡುತ್ತಿರುವೆವು ಕಂದ ಅಂತ ತಿಳಿಸಲು.
  • ಮಗುವಿನ ಬಾಳು ಜೇನಿನಂತೆ ಸಿಹಿಯಾಗಿರಲೆಂದು ಹಾರೈಸಲು.
  • ಮಗುವು ತನ್ನ ನಡೆ-ನುಡಿಗಳನ್ನು ಜೇನಿನಂತೆ ಸಿಹಿಯಾಗಿ ಬೆಳಸಿಕೊಳ್ಳಲಿಯೆಂದು.
  • ಸಿಹಿಯಾದ್ದರಿಂದ ಮಗುವು ಯಾವುದೇ ರಗಳೆಯಿಲ್ಲದೆ ಜೇನು ಚೀಪುತ್ತದೆ ಎಂದು.

ನನ್ನ ಮಗಳ ನಾಮಕರಣವೂ ಹೀಗೇ ಮಾಡಿದೆವು. ಜೇನಿನಲ್ಲಿ "Clostridium Botulimun" ಎಂಬ ಬ್ಯಾಕ್ಟೀರಿಯಾ ಇರುವ ಸಾಧ್ಯತೆ ಹೆಚ್ಚಿರುವುದರಿಂದ ಅವಳಿಗೆ ಜೇನಿನ ಬದಲಿಗೆ ಹಾಲು ಚೀಪಿಸಿದೆವು:)