Pages

Thursday, September 25, 2008

ನಾಮಕರಣ ವಿಧಾನದ ಹಿನ್ನಲೆ !!!

ಮಗುವಿಗೆ ಹೆಸರಿಡುವ ಹಬ್ಬವೇ ನಾಮಕರಣ. ವ್ಯವಹಾರ ನಾಮದ ಜೊತೆಗೆ ಕೆಲವರು ಐದು ಹೆಸರುಗಳನ್ನು ಇಡುತ್ತಾರೆ. ಮಗುವಿನ ರಕ್ಷಣೆಯ ದೃಷ್ಟಿಯಿಂದ ದೇವರ ಹೆಸರು, ಹಿರಿಯರ ನೆನಪಿಗಾಗಿ ಒಂದು, ನಕ್ಷತ್ರನಾಮ, ಮಾಸ ನಾಮ ಇತ್ಯಾದಿ... ಗಂಡು ಮಗುವಿಗೆ ಆದರೆ ೨,೪,೬ ಅಕ್ಷರಗಳ(even number) ಹೆಣ್ಣು ಮಗುವಿಗೆ ೩,೫,೭ (odd number) ಅಕ್ಷರಗಳ ಹೆಸರು ಇಡಬೇಕಂತೆ. ತಂದೆಯು ತನ್ನ ಬೆರಳುಂಗುರದಿಂದ ಅಕ್ಕಿಯ ಮೇಲೆ ಮಗುವಿನ ಹೆಸರು ಬರೆದು, ನಂತರ ಮಗುವಿನ ಕಿವಿಯಲ್ಲಿ ಹೆಸರು ಹೇಳಿ, ಉಂಗುರವನ್ನು ಜೇನುತುಪ್ಪದಲ್ಲಿ ಹಾಕಿ ಅದನ್ನು ಮಗುವಿಗೆ ನೆಕ್ಕಿಸುತ್ತಾರೆ. ಈ ಎಲ್ಲದರ ಹಿಂದಿನ ಕಾರಣವೇನಿರ ಬಹುದು ಅಂತಾ ಯೋಚಿಸಿದಾಗ ನನಗೆ ಅನಿಸಿದ್ದು ಇವು. ಈ ಕಾರಣಗಳು ಸರಿಯಿಲ್ಲದಿರಲೂ ಬಹುದು, ನಿಮಗೆ ಹೆಚ್ಚಿನ ಮಾಹಿತಿಯಿದ್ದರೆ ಹಂಚಿಕೊಳ್ಳಿ.

ಹೆಸರು ಬರೆಯಲು ತಂದೆಯು ತನ್ನ ಉಂಗುರವನ್ನೇ ಏಕೆ ಬಳಸುತ್ತಾನೆ?
ಚಿನ್ನಕ್ಕೆ ಲೋಪವಿಲ್ಲ, ಅದು ಶ್ರೇಷ್ಠವಾದದ್ದು. ಹೆಸರಿಡುವ ಕೆಲಸ ತಂದೆಯದ್ದಾದ್ದರಿಂದ ಅವನು ತೊಡುವ ಒಡವೆಗಳಲ್ಲಿ ಉಂಗುರ ಬಹಳ ಸುಲುಭವಾಗಿ ತೆಗೆದು ಹಾಕಬಹುದು. ಅಲ್ಲದೆ ಬೇರೆ ಆಭರಗಳಿಗೆ ಹೋಲಿಸಿದರೆ ಉಂಗುರದಲ್ಲಿ ಬರೆಯುವುದು ಸುಲಭ. ಜೊತೆಗೆ ರೋಮನ್ನರ ನಂಬೆಕೆಯಂತೆ ನಮ್ಮ ಎಡಗೈಯ ೪ನೇ ಬೆರಳಿನಿಂದ ಶುರುವಾಗುವ ರಕ್ತನಾಳವೊಂದು ನೇರ ಹೃದಯ ಸೇರುತ್ತದಂತೆ. ಮಗುವಿನ ಹೆಸರನ್ನು ಬರೆಯಲು ತಂದೆಯು ತನ್ನ ಹೃದಯಕ್ಕೆ ಹತ್ತಿರವಿರುವ ಬೆರಳಿನ ಉಂಗುರವನ್ನು ಬಳಸಿ ಮಗುವಿಗೆ "ನೀನು ನನಗೆ ಬಹಳ ಪ್ರೀತಿಪಾತ್ರನಾದವಳು/ನು" ಅಂತ ಹೇಳುವಂತಿದೆ.


ಅಕ್ಕಿಯ ಮೇಲೆ ಮಗುವಿನ ಹೆಸರು ಬರೆಯಲು ಕಾರಣವೇನು?
ಅಕ್ಕಿಯ ಮೆಲೆ ಬರೆದ ಹೆಸರು ತಟ್ಟೆ ಸ್ವಲ್ಪ ಅಲುಗಾಡಿದರೆ ಅಳಿಸುವುದು, ಹಾಗೆಯೇ ಈ ಪ್ರಪಂಚದಲ್ಲಿ ಯಾವುದೂ ಶಾಶ್ವತವಲ್ಲ ಎಂದು ಮಗುವಿಗೆ ತಿಳಿಸಲು.


ಉಂಗುರವನ್ನು ಜೇನುತುಪ್ಪದಲ್ಲಿ ಹಾಕಿ ಅದನ್ನು ಮಗುವಿಗೆ ನೆಕ್ಕಿಸುವುದು ಏಕೆ?
  • ಜೇನಿನಷ್ಟೇ ಸಿಹಿಯಾದ ಹೆಸರನ್ನು ನಿನಗೆ ಇಡುತ್ತಿರುವೆವು ಕಂದ ಅಂತ ತಿಳಿಸಲು.
  • ಮಗುವಿನ ಬಾಳು ಜೇನಿನಂತೆ ಸಿಹಿಯಾಗಿರಲೆಂದು ಹಾರೈಸಲು.
  • ಮಗುವು ತನ್ನ ನಡೆ-ನುಡಿಗಳನ್ನು ಜೇನಿನಂತೆ ಸಿಹಿಯಾಗಿ ಬೆಳಸಿಕೊಳ್ಳಲಿಯೆಂದು.
  • ಸಿಹಿಯಾದ್ದರಿಂದ ಮಗುವು ಯಾವುದೇ ರಗಳೆಯಿಲ್ಲದೆ ಜೇನು ಚೀಪುತ್ತದೆ ಎಂದು.

ನನ್ನ ಮಗಳ ನಾಮಕರಣವೂ ಹೀಗೇ ಮಾಡಿದೆವು. ಜೇನಿನಲ್ಲಿ "Clostridium Botulimun" ಎಂಬ ಬ್ಯಾಕ್ಟೀರಿಯಾ ಇರುವ ಸಾಧ್ಯತೆ ಹೆಚ್ಚಿರುವುದರಿಂದ ಅವಳಿಗೆ ಜೇನಿನ ಬದಲಿಗೆ ಹಾಲು ಚೀಪಿಸಿದೆವು:)

Thursday, September 11, 2008

ಅದೃಷ್ಟದಾಟ !!!

ಸೆಪ್ಟೆಂಬರ್ ೬ ೨೦೦೮, ಶನಿವಾರ ಸಂಜೆ ಫ್ಲೋರಿಡಾದ ಪಾನ್ಸ್ ಇನ್-ಲೆಟ್ ಎಂಬಲ್ಲಿ ಈಜಲು ಹೋದ ಅಪ್ಪ ಮಗ, ನೀರಿನ ಅಲೆಗಳಿಗೆ ಸಿಕ್ಕಿ ಬಿದ್ದು, ಶಾರ್ಕ್-ಗಳು ತುಂಬಿರುವ ಅಟ್ಲಾಂಟಿಕ್ ಸಮುದ್ರದಲ್ಲಿ ಸತತ ಹದಿನೈದು ಘಂಟೆಗಳ ಕಾಲ ಯಾವುದೇ ಲೈಫ್ ಜಾಕೆಟ್ ಇಲ್ಲದೇ ತೇಲುತ್ತಾಯಿದ್ದು ಬದುಕಿ ಉಳಿದ ನ್ಯೂಸ್ ಓದಿ ಆಶ್ಚರ್ಯ ಆನಂದ ಎರಡೂ ಒಟ್ಟಿಗೆ ಆಯಿತು.


೧೨ ವರ್ಷದ ಮೂಕ ಬಾಲಕ ಕ್ರಿಸ್ ಅಲೆಗಳಲ್ಲಿ ಸಿಕ್ಕಿದ್ದನ್ನು ನೋಡಿ, ಅವನನ್ನು ರಕ್ಷಿಸಲು ಹೋದ ಅವನಪ್ಪ ಕೂಡ ಅಲೆಗಲಿಗೆ ಸಿಕ್ಕಿ ಬಿದ್ದ. ಮಗನನ್ನು ಎಚ್ಚರದಿಂದ ಇಡಲು ಅಪ್ಪ, ಮಗನ ಅಚ್ಚುಮೆಚ್ಚಿನ ಡಿಸ್ನಿ ಚಲನಚಿತ್ರ "Toy Story"ಯಲ್ಲಿ Buzz Lightyearನ ‘To infinity ... and beyond’ ಎಂಬ ಡಯಲಾಗನ್ನು ರಾತ್ರಿ ಬಹಳ ಹೊತ್ತು ಮಗನಿಗೆ ಕೇಳುವಂತೆ ಹೇಳುತ್ತಾಯಿದ್ದು, ಸ್ವಲ್ಪ ಸಮಯದ ನಂತರ ಮಗನ ಧ್ವನಿ ಕೇಳದೇ ತನ್ನ ಮಗ ಇನ್ನಿಲ್ಲ ಅಂತ ಅನ್ನಿಸಿ ಹತಾಶನಾದನು. ಆದರೂ ಮಗಳನ್ನು ನೆನೆದು ತಾನು ಧೈರ್ಯಗೆಡದೇ ರಾತ್ರಿಯಿಡೀ ಎಚ್ಚರವಿದ್ದನು. ಹೆಚ್ಚಿನ ವಿವರಗಳು ಇಲ್ಲಿದೆ. ಅದರ ವಿಡಿಯೋ ನೋಡಿರಿ. ರಾತ್ರಿಯಿಡೀ ಸಮುದ್ರದಲ್ಲಿ ತೇಲುತ್ತಿದ್ದ ಹನ್ನೆರಡರ ಹರೆಯದ ಆ ಮೂಕ ಬಾಲಕನ ಧೈರ್ಯ, ಸ್ಥೈರ್ಯ ಮೆಚ್ಚಬೇಕಾದ್ದೇ. ಅವನಿಗೆ ನನ್ನ ಹಾಟ್ಸ್ ಆಫ್ !!!

ಈ ವಿಸ್ಮಯ ಓದುತ್ತಿದ್ದಂತೆಯೇ, ನಮ್ಮ ಗೆಳೆಯನಿಗೂ ಇದೇ ತರಹ ಅದೃಷ್ಟವಿರಬಾರದಿತ್ತೇ, ಆ ದಿನವೂ ಇಂತಹದೊಂದು ಚಮತ್ಕಾರ ನೆಡೆಯಬಾರದಿತ್ತೆ ಅನ್ನಿಸಿತು. ಬೇಡ ಬೇಡವೆಂದರೂ ಮನಸ್ಸು ಕಳೆದ ವರ್ಷಕ್ಕೆ ಓಡಿತು. ಇದೇ ಸೆಪ್ಟೆಂಬರ್ ತಿಂಗಳ ೨೩ನೇ ತಾರೀಖು ನಾವು ಮೂವರು ಸ್ನೇಹಿತರು ತಮ್ಮ ಮನೆಯವರೊಂದಿಗೆ ಫ್ಲೋರಿಡಾದ ಸೆಂಟ್ ಜಾರ್ಜ್ ದ್ವೀಪಕ್ಕೆ ವಿಹಾರಕ್ಕೆಂದು ಹೋಗಿದ್ದೆವು. ಸ್ನೇಹಿತ ಅನ್ಜುಂ ಈಜಲು ಸಾಗರಕ್ಕೆ ಹೊರಟರು. ಮಿಕ್ಕವರೆಲ್ಲ ಬರೀ ಈಜುಕೊಳದಲ್ಲಿ ಈಜುವವರೆ, ಹಾಗಾಗಿ ಎಲ್ಲರೂ ದಡದಲ್ಲೇ ಮಕ್ಕಳೊಂದಿಗೆ ಉಳಿದೆವು. ಆದರೆ ಕೆಲ ನಿಮಿಷಗಳಲ್ಲೇ ಅನ್ಜುಂ ಅವರು ಅಲೆಗಳ ರಭಸಕ್ಕೆ ಸಿಕ್ಕಿ ಈಜಲು ಯತ್ನಿಸುತ್ತಿದ್ದದ್ದು ಗಮನಿಸಿದೆವು. "ಸಹಾಯ ಮಾಡಿ" ಎಂದು ಬೊಬ್ಬೆಇಟ್ಟೆವು ಆದರೆ ಹತ್ತಿರದಲ್ಲಿದ್ದ ಯಾರಿಗೂ ಈಜು ಬರುತ್ತಿರಲಿಲ್ಲ. ಬೀಚ್-ನ ಗಾರ್ಡ್-ಗಳು ಬರುವಷ್ಟರಲ್ಲಿ ನಮ್ಮ ಸ್ನೇಹಿತ ಈಜುವುದನ್ನು ನಿಲ್ಲಿಸಿ ತೇಲುತ್ತಿದ್ದರು. ಅವರನ್ನು ದಡಕ್ಕೆ ಎಳೆದು ತಂದಾಗಲೇ ಜೀವವಿಲ್ಲವೆಂದು ನನಗೆ ಗೊತ್ತಾಗಿ ಹೋಯಿತು, ಕಣ್ಣ್ ಸನ್ನೆಯಲ್ಲೇ ನನ್ನವರಿಗೆ ವಿಚಾರ ತಿಳಿಸಿ ೭ ತಿಂಗಳ ಗರ್ಭಿಣಿಯಾಗಿದ್ದ ನಾನು ಆಗ ಆದ ಶಾಕ್-ನಿಂದ ಸುಧಾರಿಸಿಕೊಳ್ಳಲು ಹಿಂದೆ ಸರಿದು ಮಕ್ಕಳ ಜೊತೆ ಕುಳಿತೆ. ವೈದ್ಯ ವೃತ್ತಿಯಲ್ಲಿ ಎಷ್ಟೋ ಸಾವುಗಳನ್ನು ಕಂಡಿದ್ದೂ, ಹಲವಾರು ಮೃತರ ಮನೆಯವರಿಗೆ ವಿಷಯ ನಾನೆ ತಿಳಿಸಿದ್ದರೂ, ಪ್ಯಾರಾಮೆಡಿಕ್ ನವರು Resuscitation ಕೊನೆ ಪ್ರಯತ್ನ ಮಾಡುತ್ತಿರುವಾಗ ಸ್ನೇಹಿತನ ಪತ್ನಿ ನನ್ನ ಬಳಿ ಬಂದು "ಏನ್ ಆಗುತ್ತೆ?ನನ್ನ ಅನ್ಜುಂ ನನಗೆ ಸಿಗುತ್ತಾರಲ್ಲವಾ?" ಅಂತೆಲ್ಲಾ ಕೇಳಿದಾಗ ಧೈರ್ಯಗೆಡಬೇಡಿ ಅಂತ ಹೇಳಲಷ್ಟೆ ನನ್ನಿಂದ ಸಾಧ್ಯವಾಗಿದ್ದು. ನಮ್ಮೆಲ್ಲರ ಕಣ್ಣೆದುರಿನಲ್ಲೇ ಗೆಳೆಯ ಇನ್ನಿಲ್ಲವಾದರು. ಸ್ನೇಹಿತನ ಪತ್ನಿ ಮತ್ತು ೫ ವರ್ಷದ ಅವರ ಮಗಳನ್ನು ಸಾಂತ್ವಾನ ಮಾಡುತ್ತಾ ಮನೆಗೆ ಬಂದೆವು.

ಆಹ್, ನನ್ನಿಂದ ಏನೂ ಮಾಡಲಾಗಲಿಲ್ಲವಲ್ಲ ಅನ್ನೊ ನೋವು ಇಂದಿಗೂ ನನ್ನನ್ನು ಕಾಡುತ್ತದೆ.

Tuesday, September 9, 2008

ಅಲ್ಲಿ ನೋಡು ಗಣಪ ಇಲ್ಲಿ ನೋಡು ಗಣಪ

ಅಲ್ಲಿ ನೋಡು ಗಣಪ
ಇಲ್ಲಿ ನೋಡು ಗಣಪ
ಮೇಲೆ ನೋಡು ಗಣಪ
ಕೆಳಗೆ ನೋಡು ಗಣಪ

ಈ ಹಾಡು ನಾವು ಗಣೇಶನ ವಿಸರ್ಜನೆಗೆ ಹೋಗೋವಾಗ ಹಾಡ್ತಾಯಿದ್ವಿ. ಅಮೇರಿಕಾದಲ್ಲಿರುವ ನನ್ನ ಹಲವಾರು ಸ್ನೇಹಿತೆಯರು ಹಬ್ಬಕ್ಕೆ ತಾವೇ ಮಣ್ಣಿನಿಂದ, ಗೋಧಿಹಿಟ್ಟಿನಿಂದ, ಅರಿಶಿನದ ಗಣಪತಿಯನ್ನ ಮಾಡಿ ಪೂಜಿಸಿದ್ದರು, ಅವರು ಫೋಟೋಗಳನ್ನ ನನ್ನೊಂದಿಗೆ ಹಂಚಿಕೊಂಡರು. ಬನ್ನಿ ಅವರೆಲ್ಲರ ಮನೆ ಗಣೇಶ ದರ್ಶನ ಮಾಡಿ ಬರೋಣ.

ನಮ್ಮ ತಾಯಿ ಬೆಂಗಳೂರಿನಲ್ಲಿ ಹಬ್ಬದ ದಿನ ನನ್ನ ಗಣಪನ ಕಲೆಕ್ಶನ್ ನಲ್ಲಿ ಕೆಲವನ್ನು ಹೊರ ತೆಗೆದು ಜೋಡಿಸಿದ್ದರು.



ಶಿಕಾಗೋದಲ್ಲಿರುವ ಆತ್ಮೀಯ ಗೆಳತಿ ರೋಹಿಣಿ ಪ್ಲೇ ಡೋನಿಂದ ಗಣಪತಿಯನ್ನು ಮಾಡಿದ್ದು ಹೀಗೆ.



ಇವರು ೨೦೦೬ರಲ್ಲಿ ಮಾಡಿದ್ದ ವಿನಾಯಕನ ಮೂರ್ತಿ.


ಗೋಧಿ ಹಿಟ್ಟಿನಲ್ಲಿ ಮಾಡಿದ ಗಜಾನನ.



ಅರಿಶಿನದ ವಿನಾಯಕ.



ಮೈದಾ ಹಿಟ್ಟಿನ ಲಂಬೋದರ.




ಬ್ಲ್ಯಾಕ್ ಕ್ಲೇನಲ್ಲಿ ಮೂಡಿದ ವಿಘ್ನೇಶ್ವರ.


ಗಜಮುಖ


ಮಹೇಶ್ವರ ಪುತ್ರ


ಹೂವಿನ ರಂಗವಲ್ಲಿಯಲ್ಲಿ ಗಣಪ


ಸಿದ್ದಿವಿನಾಯಕನ ರಂಗೋಲಿ


ಮೂಶಿಕವಾಹನ



ಕಳೆದ ವಾರ ಗಣೇಶ ಹಬ್ಬದ ಸ್ಪೆಶಲ್ ಅನ್ನುವಂತೆ ಹಲವಾರು ಬ್ಲಾಗ್-ಗಳಲ್ಲಿ ಗಣಪನದ್ದೇ ವಿಷಯ.

ಕೇಕ್ ರಾಣಿ ಎಂದೇ ಸ್ನೇಹಿತರಲ್ಲಿ ಚಿರಪರಿಚಿತಳಾದ ಅಟ್ಲಾಂಟದಲ್ಲಿರುವ ನಮ್ರತಾ ಪ್ಲೇ ಡೊನಿಂದ ಮಾಡಿದ ಗೌರಿ-ಗಣೇಶ ಇಲ್ಲಿದೆ. ಬಾಯಲ್ಲಿ ನೀರೂರಿಸುವ ತಿಂಡಿಗಳನ್ನ ನೋಡ್ತಾ ಅಲ್ಲೇ ಇರ್ಬೇಡಿ, ವಾಪಸ್ ಇಲ್ಲಿಗೆ ಬನ್ನಿ ಇನ್ನೂ ಹಲವಾರು ಗಣೇಶಗಳಿವೆ ನೋಡೋಕೆ:)

ಮೊವಂಜ, ತಾಂಜನಿಯ,ಪೂರ್ವ ಆಫ್ರಿಕದಲ್ಲಿರುವ ಅಹರ್ನಿಶಿ ಶ್ರೀಧರ್ ಅವರು ನೂರಿಪ್ಪತ್ತಕ್ಕೂ ಹೆಚ್ಚು ಜನ ಸ್ನೇಹಿತರೊಡನೆ ಹಬ್ಬ ಆಚರಿಸಿದ್ದು ಹೀಗೆ.

ಆರ್ಕುಟ್ ನಲ್ಲಿರುವ Mrs South Indies ಎಂಬ ಬಳಗದ ಸದಸ್ಯೆಯರು ಹಬ್ಬ ಆಚರಿಸಿದ್ದು ಹೀಗೆ.

ಅಪ್ಪಟ ಹುಟ್ಟು ಮೈಸೂರು ಕನ್ನಡಿಗ ಎಂದು ಹೇಳಿಕೊಳ್ಳುವ ಶಂಕರ ಪ್ರಸಾದ ಅವರು ತಮ್ಮ ಸೋಮಾರಿ ಕಟ್ಟೇಲಿ ಗಣಪನ ಕೂರ್ಸಿದ್ದು ಹೀಗೆ:)


ಐರ್ ಲ್ಯಾಂಡಿನಲ್ಲಿರೋ ಕನ್ನಡಿಗರು ಸಂಭ್ರಮದಿಂದ ಗಣೇಶ ಹಬ್ಬ ಆಚರಿಸಿದರು. ಹಬ್ಬದ ಫೋಟೋಗಳು ಇಲ್ಲಿವೆ.


Ganesha Outsourced! ಶಿಕಾಗೋದಲ್ಲಿನ ನಮ್ಮ ಸಾಫ್ಟ್ ವೇರ್ ಇಂಜಿನೀಯರ್ ಸಾಹೇಬ್ರು ಚೀನಾದವರು ಮಾಡಿದ ಗಣಪನ ತಂದು ಪೂಜೆ ಮಾಡಿದ್ರು.


ಶುಭಾ ಅವರು ಚಿಕ್ಕಂದಿನ ದಿನಗಳ ಹಬ್ಬ ನೆನೆಯುತ್ತಾ ಬರೆದದ್ದು Gowri Ganesha..... and memories of 'GANPATI KOODSIDDIRA?


ಶ್ರೀ ಅವರು ತಮ್ಮ ಬ್ಲಾಗಿನಲ್ಲಿ ಗಣೇಶಹಬ್ಬದ ಆಚರಣೆಯ ಬಗ್ಗೆ ಪೂರ್ತಿ ವಿವರ ಕೊಟ್ಟಿದ್ದಾರೆ.


ಗಣೇಶ ಹಬ್ಬದ ಬಗ್ಗೆ ದಟ್ಸ್ ಕನ್ನಡದಲ್ಲಿ ಹಲವಾರು ಲೇಖನಗಳು ಮೂಡಿ ಬಂದಿವೆ. ಓದಿರಿ

Update : Part of this post has been posted here at Alaivani

Wednesday, September 3, 2008

ಗಣೇಶ ಹಬ್ಬದ ಶುಭಾಶಯಗಳು!!!

ಇಂದು ವಿನಾಯಕ ಚತುರ್ಥಿ. ಬೆಂಗಳೂರಿನಲ್ಲಿದ್ದಾಗ ಗೌರೀ ಗಣೇಶ ಹಬ್ಬಗಳು ಬಂದರೆ ಎಲ್ಲೆಲ್ಲಿದ ಸಂಭ್ರಮ. ರಸ್ತೆಗಳ ತುಂಬಾ ವಿವಿಧ ಎತ್ತರ, ಬಣ್ಣದ ಗಣೇಶನ ಮಣ್ಣಿನ ಮೂರ್ತಿಗಳ ಸಾಲುಸಾಲು ಕಣ್ಣಿಗೆ ಹಬ್ಬ ಉಂಟು ಮಾಡುತ್ತದೆ. ಅಲ್ಲದೇ ಮಾರುಕಟ್ಟೆಯ ತುಂಬಾ ಹಬ್ಬಕ್ಕೆ ಬೇಕಾಗುವ ಹೂವು ಪತ್ರೆಗಳು, ಹಣ್ಣುಗಳು, ಗರಿಕೆ ಹುಲ್ಲು, ಮಾವಿನ ಸೊಪ್ಪು-ಬಾಳೆ ಕಂದು, ಅಲಂಕಾರಕ್ಕೆ ಬಣ್ಣಬಣ್ಣದ ಕಾಗದಗಳು.

ಚಿಕ್ಕಂದಿನಿಂದಲೂ ಗಣಪ ನನ್ನ ಜೀವನದಲ್ಲಿ ವಿಶೇಷ ರೀತಿಯಲ್ಲಿ ಹಾಸುಹೊಕ್ಕಿಬಿಟ್ಟಿದ್ದಾನೆ. ಬೆಳಗ್ಗೆ ಸ್ನಾನ ಮುಗಿಸಿ ಹೊಸ ಬಟ್ಟೆ ಹಾಕಿಕೊಂಡು, ಅಪ್ಪನ ಜೊತೆ ನಾವ್ ಮೂರೂ ಜನ ಹೋಗ್ಬೇಕು ಅಂಗಡಿಗೆ ಗಣೇಶನ ಸೆಲೆಕ್ಟ್ ಮಾಡೋಕೆ. ಮನೆಗೆ ಬಂದು ಪೂಜೆ ಮುಗಿಸಿ, ಮದ್ಯಾಹ್ನ ಭರ್ಜರಿ ಊಟವಾದ ನಂತರ ದೊಡ್ಡ ಬಟ್ಟಲಿನಲ್ಲಿ ಅಕ್ಷತೆ ತುಂಬಿಕೊಂಡು ಗೆಳೆಯರೊಂದಿಗೆ ಮನೆ ಮನೆಗೆ ಹೋಗಿ "ಗಣೇಶ ಕೂರ್ಸಿದ್ದೀರಾ?" ಅಂತಾ ಕೇಳ್ತಾ ಅವರ ಮನೆಗಳಿಗೆ ಹೋಗಿ ವಿನಾಯಾಕನಿಗೆ ನಮಸ್ಕಾರ ಮಾಡಿ, ಅವರು ಕೊಟ್ಟ ತಿಂಡಿ ತಿಂದು ಮುಂದಿನ ಮನೆಗೆ ಹೋಗ್ತಾಯಿದ್ವಿ. ನೂರಾಎಂಟು ಮನೆಗಳಿಗೆ ಹೋಗಿ ವಿವಿಧ ಬಣ್ಣ, ಎತ್ತರದ, ಗಣಪತಿಯನ್ನ ನೋಡಿ ಬರ್ತಾಯಿದ್ವಿ. ಕೊನೆಕೊನೆಗೆ ಕೊಟ್ಟ ತಿಂಡಿ ತಿನ್ನಲಾರದೆ ಕವರಿನಲ್ಲಿ ತುಂಬಿಕೊಂಡು ಮನೆಗೆ ಬರ್ತಾಯಿದ್ದದ್ದು ಉಂಟು.

ಆಮೇಲೆ ಸ್ವಲ್ಪ ವರ್ಷ ಅಣ್ಣ-ತಮ್ಮ ಮತ್ತಿತರ ನೆರೆಮನೆ ಹುಡುಗರೊಂದಿಗೆ ಸೇರಿ ಬೀದಿಯಲ್ಲಿ ಗಣಪತಿ ಕೂರಿಸ್ತೀವಿ ಎಂದು ಮನೆ ಮನೆಗೆ ಹೋಗಿ ಚಂದಾ ಎತ್ತುತ್ತಿದ್ದೆವು. ಹಬ್ಬಕ್ಕೆ ತಿಂಗಳು ಇರುವಾಗಲೇ ಡ್ಯಾನ್ಸ್, ಡ್ರಾಮಾ ಇತ್ಯಾದಿ ಸಾಂಸ್ಕೃತಿಕ ಕಾರಯಕ್ರಮಗಳ ತಾಯಾರಿ ಶುರುವಾಗುತ್ತಿತ್ತು. ಹಬ್ಬದ ದಿನ "ಅಮ್ಮ ಬೇಗ ಪೂಜೆ ಮುಗಿಸಮ್ಮ , ನಮ್ಮ್ ಗಣೇಶ ಕಾಯ್ತಿದ್ದಾನೆ" ಅಂತ ಬೀದಿಗೆ ಓಡುತ್ತಿದ್ವಿ. ಸಂಜೆ ಎಲ್ಲಾ ಸಾಂಸ್ಕೃತಿಕ ಕಾರಯಕ್ರಮಗಳು ಮುಗಿದು ಮಹಾಮಂಗಳಾರತಿ ಆದ್ಮೇಲೆ ನಾಲ್ಕಾರು ಬೀದಿಯಲ್ಲಿ ನಮ್ಮ್ ಗಣಪನ ಮೆರವಣಿಗೆ ಮಾಡುತ್ತಾ..
"ಗಣೇಶ ಬಂದ
ಕಾಯ್ ಕಡ್ಬು ತಿಂದ
ಹೊಟ್ಟೆ ಮೇಲೆ ಗಂಧ
ಚಿಕ್ಕ್ ಕೆರೇಲ್ ಬಿದ್ದ
ದೊಡ್ಡ್ ಕೆರೇಲ್ ಎದ್ದ "
ಅಂತಾ ಹಾಡಿ ಕುಣಿದಾಡಿ, ಕೊನೆಗೆ ಮತ್ತೆ ಮುಂದಿನ ವರ್ಷ ಬಾರಯ್ಯ ಪ್ರಭುವೇ ಅಂತ ವಿಸರ್ಜನೆ ಮಾಡಿ ಮನೆ ಬರ್ತಾಯಿದ್ದದ್ದು. ಛೆ, ಆಗೆಲ್ಲಾ ನಮ್ಮ್ ಮನೇಲಿ ಕ್ಯಾಮೆರಾ ಇರಲಿಲ್ಲ, ಆ ಎಲ್ಲಾ ಸವಿ ನೆನಪುಗಳು ಮನಸಿನಲ್ಲಿದೆ ಅಷ್ಟೆ.

ನಾವು ಮನೆ ಬದಲಾಯಿಸಿದ ನಂತರ ಇದೆಲ್ಲಾ ನಿಂತು ಹೋಯಿತು. ಆಗ ಶುರುವಾಯಿತು "ಗಣಪನ ವಿಗ್ರಹ" ಸಂಗ್ರಹಿಸುವ ನನ್ನ ಹವ್ಯಾಸ. ಮಣ್ಣು, ಹಿತ್ತಾಳೆ, ಪ್ಲಾಸ್ಟಿಕ್, ಪೇಪರ್ ಗಣೇಶ.. ವಾದ್ಯ ಗಣಪತಿ, ನಾಟ್ಯ ಗಣಪತಿ ಎಲ್ಲಾ ಬಂದು ನನ್ನ ಕೈಸೇರಿದವು. ಪ್ರತಿ ವರ್ಷ ಹಬ್ಬ ಬಂತೆಂದರೆ ಪೂಜಿಸುವ ಮೂರ್ತಿಯ ಕೆಳಗಡೆ ನನ್ನೆಲ್ಲಾ ಕಲೆಕ್ಷನ್ ಗಣಪಗಳನ್ನು ಜೋಡಿಸ್ತಾಯಿದ್ದೆ, ಜೊತೆಗೆ ಹಲವು ಬಗೆಯ ಗಣಪನ ರಂಗೋಲಿಯನ್ನು ಹಾಕಿ ಸಿಂಗರಿಸ್ತಾಯಿದ್ದೆ. ವರ್ಷದಿಂದ ವರ್ಷಕ್ಕೆ ನನ್ನ ಗಣಪ ವಿಗ್ರಹಗಳ ಸಂಖ್ಯೆ ಹೆಚ್ಚುತ್ತಾ ಹೋಯಿತು. ಮನೆಯ ಶೋಕೇಸ್ ನಲ್ಲಿ ಜಾಗ ಕಮ್ಮಿಯಾಗ್ತಾ ಬಂತು. ಮದುವೆಯ ನಂತರ ಅತ್ತೆಮನೆನೂ ತುಂಬೋಕೆ ಶುರು ಮಾಡಿದೆ:)

2007 - Our first try!
ಈಗ ಈ ಪರದೇಶ ಅಮೇರಿಕಾದ ತಲಹಾಸಿಯಲ್ಲಿ ಮಣ್ಣಿನ ಮೂರ್ತಿ ಸಿಗದೇ ಪರದಾಡುತ್ತಿದ್ದಾಗ ಗೆಳತಿಯೊಬ್ಬರು ತಾವೇ ಮೂರ್ತಿಯನ್ನು ಮಾಡಿಕೊಳ್ಳುತ್ತೇವೆ ಅಂತ ಹೇಳಿದ್ದು ಕೇಳಿ, ನಾವೂ ಪ್ರಯತ್ನಿಸೋಣ ಅಂತ ಹೋದ ವರುಷ ಅಂಗಡಿಯಿಂದ ತಂದ ಜೇಡಿ ಮಣ್ಣಿನಿಂದ ಗಣಪನ ಮೂರ್ತಿ ಮಾಡಿ ಹಬ್ಬ ಮಾಡಿದ್ದೆವು.

ನನಗೆ ಸ್ಫೂರ್ತಿ ಕೊಟ್ಟ ನನ್ನ ಗೆಳತಿ ಮಣ್ಣಿನ ಗಣಪನಿಗೆ ನವಧಾನ್ಯದ ಅಲಂಕಾರ ಮಾಡಿದ್ದು ಹೀಗೆ.
ಈ ವರ್ಷದ ನಮ್ಮ ಮನೆಯಲ್ಲಿ ೮ ತಿಂಗಳ ನಮ್ಮ ಪುಟ್ಟು ಗೌರಮ್ಮನ ಜೊತೆಗೂಡಿ ನಾವು ಮಾಡಿದ ವಿನಾಯಕ.
2008

ಹಬ್ಬದ ರಂಗೋಲಿ.
ಶ್ರೀ ಸಿದ್ದಿವಿನಾಯಕನ ಕೃಪೆ ಎಲ್ಲರ ಮೇಲೆ ಸದಾಯಿರಲಿ:)

ಈ ವರ್ಷ ಹಬ್ಬದ ಹೆಚ್ಚಿನ ಫೋಟೋಸ್ ನನ್ನ ಮಗಳ ಬ್ಲಾಗಿನಲ್ಲಿ ನೋಡಿ.