Pages

Wednesday, September 30, 2009

ಕರ್ಕಿಯವರ ದಿವ್ಯ ಜ್ಯೋತಿ!

ದಿವ್ಯ ಜ್ಯೋತಿ
ತಿಳಿ ನೀಲದಲ್ಲಿ ತಾ ಲೀನವಾಗಿ ಅವ ಹೋದ ದೂರ ದೂರ
ಬೆಳಗಿಹುದು ಇಲ್ಲಿ ಅವ ಬಿಟ್ಟ ಬೆಳಕು: ಇನ್ನೊಮ್ಮೆ ಏಕೆ ಬಾರ?

ಅಂದು ಸಂಜೆ ಪ್ರಾಥಱನೆಗೆ ದೇವಮಂದಿರದ ದಾರಿಯಲ್ಲಿ
ಆಚೆ ಈಚೆ ಮೊಮ್ಮಕ್ಕಳಿಬ್ಬರಲಿ ಮೈಯಭಾರ ಚೆಲ್ಲಿ
ಜಗದ ಕರುಣೆ ನಡೆವಂತೆ ನಡೆದು ಮಂದಿರದ ಪೀಠವೇರಿ
ನಿಂದನಿಲ್ಲೊ! ಜಡವುಳಿದು ಜೀವವೊಂದಾಯ್ತು ದೇವನಲ್ಲಿ.

ಎಸೆದ ಗುಂಡಿಗಾ ಕುಸಿದ ದೇಹದಲಿ ವಿಮಲ ರಕ್ತ ಚೆಲ್ಲಿ
ಮೀಯಿಸಿತ್ತು ಈ ಜಗದ ಮನವನೇ ಶೋಕ ಜಲಧಿಯಲ್ಲಿ
ಮುಗಿದ ಕೈಯು ಮುಗಿದಂತೆ ಇತ್ತು: ನೆಲಸಿತ್ತು ಕ್ಷಮೆಯು ಮೊಗದಿ
ಎದೆಯೊಳೆಂಥ ತಿಳಿಭಾವವಿತ್ತು! ಅದನಾವ ಬಲ್ಲ ಜಗದಿ?

ಹೋದ ಹೋದನವ ತ್ಯಾಗಜೀವನದ ತುತ್ತ ತುದಿಯನೇರಿ
ಏರಿ ಏರಿದೊಲು ಅಂತರಂಗದೈಸಿರಿಯ ಜಗಕೆ ತೂರಿ
ಸತ್ಯ ಪ್ರೇಮಗಳ ಸತ್ವವನ್ನೆ ಕಣ್ಣೆದುರು ಎತ್ತಿ ತೋರಿ
ಬೇರೆ ಲೋಕದನುಭಾವ ಬೀರಿ ಹೋದನಾವ ದಾರಿ?

ಎನಿತು ಸರಳ ನುಡಿ, ಎಷ್ಟು ಸಹಜ ನಡೆ ಮನದ ಮಹತಿಯೇನು!
ಅವನ ಎದೆಯ ಉನ್ನತಿಯ ನಿಲುಕುವುದು ಯಾವ ಗಿರಿಯ ಸಾನು?
ಇಹುದೆ ಅವನ ಕರುಣೆಯನು ಧರೆಗೆ ಕರೆವಂಥ ಕಾಮಧೇನು?
ಅವನು ಗೈದ ಲೀಲೆಯಲಿ ಲಯಸಿತೆಂಥವರ "ನಾನು-ನಾನು ".

ತಿಳಿದಿಹುದು ಚಿತ್ತ, ಹರಿದಿಹುದು ನೋಟ ಮೇಲಕ್ಕೆ ಬಾನಿನೆಡೆಗೆ
ಆ ಜಾಡ ಹಿಡಿದು ಇಳಿದಂತೆ ಇಹುದು ಬೆಳಕೊಂದು ಕೆಳಗೆ ಇಳೆಗೆ
"ಏನಷ್ಟು ಭ್ರಾಂತಿ? ಕಾಣದೆಯೆ ಜ್ಯೋತಿ?" ಎಂಬರುಹು ಮೂಡಲೊಡನೆ
ಬೆಳಕ ನಂಬಿ ನಿಂದಿಹನು ಧೀರ ಎದೆ ತೆರೆದು ನಾಡ ಕರೆಗೆ.
--ಡಾ ದುಂಡಪ್ಪ ಸಿದ್ಧಪ್ಪ ಕರ್ಕಿ

ಯಾವುದೇ ಕನ್ನಡ ಸಮಾರಂಭ ಸಾಮಾನ್ಯವಾಗಿ ಶುರುವಾಗುವುದು "ಹಚ್ಚೇವು ಕನ್ನಡದ ದೀಪ" ಭಾವ ಗೀತೆಯಿಂದ. ಹಾಡು ಇಲ್ಲಿ ಕೇಳಿ ಈ ಗೀತೆಯಿಂದ, ಇದರ ರಚನಕಾರ "ಡಾ ದುಂಡಪ್ಪ ಸಿದ್ಧಪ್ಪ ಕರ್ಕಿ" ಯವರು ಕನ್ನಡಿಗರ ಮನೆಮಾತಾಗಿಬಿಟ್ಟಿದ್ದಾರೆ. ಇವರ ಕವನ ಸಂಕಲನಗಳು ನಕ್ಷತ್ರ ಗಾನ, ಭಾವ ತೀರ್ಥ, ಗೀತ ಗೌರವ, ಕರಿಕೆ ಕಣಗಿಲು, ನಮನ, ತನನ ತೋಂ, ಬಣ್ಣದ ಚೆಂಡು... ನಕ್ಷತ್ರ ಗಾನ ಪ್ರಕಟವಾದ ಕರ್ಕಿಯವರ ಮೊದಲ ಕವನ ಸಂಕಲನ. ’ಹಚ್ಚೇವು ಕನ್ನಡದ ದೀಪ’ ವನ್ನು ಒಳಗೊಂಡಿರುವ ಕವನಸಂಕಲನ ಇದು. ಭಾವತೀರ್ಥ ದಲ್ಲಿ, ನಮ್ಮ ನಾಡಿನ ಕಾರಾವರ, ಗೋಕರ್ಣ, ಕೂಡಲ ಸಂಗಮ, ಜೋಗ ಇತ್ಯಾದಿ ಹಲವಾರು ಪ್ರೇಕ್ಷಣೀಯ ಸ್ಥಳಗಳ ವರ್ಣನೆಯಿದೆ. ಕರ್ಕಿಯವರು ಮಕ್ಕಳಿಗಾಗಿ ರಚಿಸಿರುವ ಬಣ್ಣದ ಚೆಂಡು (ನನ್ನ ಮಗಳ ಬ್ಲಾಗ್ ನಲ್ಲಿದೆ ಓದಿ) ಮತ್ತು ತನನ ತೋಂ ಕವನ ಸಂಕಲನಗಳು ಬಹಳ ಸರಳವಾಗಿದ್ದು, ಮಕ್ಕಳಿಗೆ ಕಲಿಸಿಕೊಡಲು ಚೆನ್ನಾಗಿವೆ. ಬೆಲ್ಲ ತಿನ್ನುವ ಮಲ್ಲ ಇತ್ಯಾದಿ ಕಥಾನಕ ಪದ್ಯಗಳಾಗಿದ್ದು ಮಕ್ಕಳಲ್ಲಿ ಆಸಕ್ತಿ ಮೂಡಿಸುವಂತವಾಗಿವೆ. ಕರ್ಕಿಯವರ "ದಿವ್ಯ ಜ್ಯೋತಿ", ಮಹಾತ್ಮ ಗಾಂಧಿಯವರು ಮರಣ ಹೊಂದಿದಾಗ ಬರೆದ ಕವನ.

ಕರ್ಕಿಯವರ ತನನ ತೋಂ ಜೊತೆಗೆ ಈ ಕವನವನ್ನು ಕಳುಹಿಸಿ ಕೊಟ್ಟ ಮಂಜುನಾಥ್ ಬೊಮ್ಮನಕಟ್ಟಿ ಅವರಿಗೆ ವಂದನೆಗಳು!!

Monday, August 31, 2009

ಓಡಿ ಬಾ ಓಡೋಡಿ ಬಾ - ಚಕ್ರತೀರ್ಥ

ಈ ಇಬ್ಬರು ಬಾಲನಟರು ಯಾರು ಗೊತ್ತಾ?

ಚಕ್ರತೀರ್ಥ (1967) -

ಸಾಹಿತ್ಯ: ಆರ್.ಎನ್.ಜಯಗೋಪಾಲ್
ಸಂಗೀತ: ಟಿ.ಜಿ.ಲಿಂಗಪ್ಪ
ಗಾಯನ: ಬಿ.ಕೆ.ಸುಮಿತ್ರ ಮತ್ತು ಬೆಂಗಳೂರು ಲತಾ.

ಝೂಟ್.......
ಹಾಹಾಹಾಹಹ ಹಾಹಾ...ಲಲಲಲಲಲಾಲಾ

ಓಡಿ ಬಾ ಓಡೋಡಿ ಬಾ ಚಿನ್ನ ನನ್ನ ಬೆನ್ನ ಹಿಂದೆ ಓಡಿ ಬಾ
ಓಡುವೇ ನಾ ಓಡುವೇ ಜಿಂಕೆ ಹಾಗೆ ಓಡೀ ನಿನ್ನಾ ಕೂಡುವೇ
ಓಡಿ ಬಾ..ಝೂಟ್...

ಮಣ್ಣಿನಿಂದ ಕಪ್ಪೆಗೂಡು ಕಟ್ಟಬಲ್ಲೆಯಾ
ಅಲ್ಲಿ ನೀನು ಕಪ್ಪೆಯೊಂದ ಸಾಕಬಲ್ಲೆಯಾ
ಕಣ್ಣು ಮುಚ್ಚಿ ನನ್ನಾ ಹಿಡಿಯಬಲ್ಲೆಯಾ
ನಾ ಹಾರೆದಂತೆ ದೂರ ನೀನು ಹಾರಬಲ್ಲೆಯಾ...ಝೂಟ್...

ನನ್ನಾ ರೀತಿ ರೆಂಬೆ ಹತ್ತಿ ನೀನು ನೋಡುವಾ
ನನ್ನಾ ಸಾಟಿ ಕುಂಟೊಬಿಲ್ಲೇ ಆಡು ನೋಡುವಾ
ಸುತ್ತಿ ಸುತ್ತಿ ಲಾಗಾ ಹಾಕು ಅಮ್ಮಯ್ಯಾ
ಈ ಕೋತಿಯಾಟ ದೊಂಬರಾಟ ಬೇಡ ದಮ್ಮಯ್ಯಾ...ಝೂಟ್...

ಕಾಗದದ ದೋಣೀಯೊಂದ ನಾವು ಮಾಡುವಾ
ನೀರಿನಲ್ಲೀ ದೋಣಿಯನ್ನು ತೇಲಿ ಬಿಡುವಾ
ಅಂಚಿನಲ್ಲಿ ನಿಂತೂ ನಾವು ನೋಡುವಾ
ಹಾಯಾಗೀ ಒಂದಾಗೀ ಇನ್ನೆಂದೂ ಬಾಳುವಾ...ಝೂಟ್...

ಓಡಿಬಾ ....ನಾ ಓಡುವೇ...ಓಡಿಬಾ...ಝೂಟ್....

Friday, August 21, 2009

ಗಣಪನಿಂದ ಆಗದಿರಲಿ ಪರಿಸರಕ್ಕೆ ಲೋಪ!!

ಎಲ್ಲರಿಗೂ ಗೌರಿ ಗಣೇಶ ಹಬ್ಬದ ಶುಭಾಶಯಗಳು!!

ಗಣೇಶ ಹಬ್ಬ ಬಂತೆಂದ್ರೆ ಈಮೈಲ್, ಆರ್ಕುಟ್, ಬ್ಲಾಗ್, ಫೇಸ್ಬುಕ್, ಟ್ವಿಟ್ಟರ್, ಎಲ್ಲೆಲ್ಲೂ ಹಬ್ಬದ ಶುಭಾಶಯಗಳ ಸುರಿಮಳೆ.:)

ಹಬ್ಬ ಮುಗಿದಮೇಲೆ ಮುಂಬೈಯಲ್ಲಿ ಅರ್ಧಂಬರ್ಧ ಮುಳುಗಿದ/ ಮುರಿದ ಮೂರ್ತಿಗಳ ಫೋಟೋ ಮತ್ತು ವಿಗ್ರಹಗಳಲ್ಲಿ ಉಪಯೋಗಿಸುವ ಬಣ್ಣಗಳಲ್ಲಿರುವ ಲೆಡ್ ಮತ್ತಿತರೆ ರಾಸಾಯನಿಕಗಳಿಂದ ಆಗುವ ಹಾನಿಗಳ ಕುರಿತು ಹಲವು forward ಮೈಲ್ ಗಳು !!

ಇದು ಪ್ರತಿವರ್ಷ ನಡಿಯುತ್ತಲೇ ಇದೆ. ಆದರೆ ಪರಿಸರಪ್ರೇಮಿ ಗಣಪನ ವಿಗ್ರಹಗಳು ಈಗ ಹೆಚ್ಚು ಜನಪ್ರಿಯವಾಗಿದೆ. ಯಾವುದೇ ಬಣ್ಣವಿಲ್ಲದೇ ಅಥವಾ ತರಕಾರಿ/ಹೂವುಗಳಿಂದ ತಯಾರಿಸಲಾದ ಬಣ್ಣಗಳಿಂದ ಅಲಂಕರಿಸಲ್ಪಟ್ಟ ಮೂರ್ತಿಗಳು ಈಗ ಎಲ್ಲೆಲ್ಲೂ ಸಿಗುತ್ತವೆ. ತಲಹಸಿ ಅಂತಹ ಸಣ್ಣ ಊರಿನಲ್ಲೂ ಈಗ ಇವು ಲಭ್ಯವಿದೆ. ಇವುಗಳ ಬಗ್ಗೆ ಇನ್ನಷ್ಟು ತಿಳಿಯೋಣ...

ಪರಿಸರ ಗಣಪತಿ :
ಈ ತಾಣದಲ್ಲಿ ಗಣೇಶ ವಿಗ್ರಹವನ್ನು ಸ್ವಂತ ನಾವೆ ಹೇಗೆ ತಯಾರಿಸಬಹುದು ಎಂಬುದರ ಬಗ್ಗೆ ವಿವರವಾಗಿ ವಿಡಿಯೋ ಮೂಲಕ ತಿಳಿಸಲಾಗಿದೆ. ಅಲ್ಲದೇ ಅವು ಮಾರಾಟಕ್ಕೆ ಎಲ್ಲಿ ಲಭ್ಯವಿದೆ ಮತ್ತಿತರ ಮಾಹಿತಿಯಿದೆ.

Hindu Blog :
ಈ ಬ್ಲಾಗಿನಲ್ಲಿ ಮಣ್ಣಿನಿಂದ ಅಥವಾ ಕಾಗದದಿಂದ ಗಣೇಶನನ್ನು ಮಾಡುವುದು ಹೇಗೆ ಅಂತ ಸುಲಭವಾಗಿ ತಿಳಿಸಲಾಗಿದೆ.
ಕಾಗದ ಗಣೇಶನನ್ನು ಮಾಡುವುದು ಹೀಗೆ.

ಮುಂಬೈನಲ್ಲಿರುವ ರಮೇಶ್ ಅವರು ತೆಂಗಿನಕಾಯಿ ಚಿಪ್ಪಿನಲ್ಲಿ ಗಣಪನನ್ನು ಮಾಡುತ್ತಾರೆ. ಅವರ ಗಣಪನ ವಿಷೇಶ ಏನಂದ್ರೆ ಹೊಟ್ಟೆಯ ಜಾಗದಲ್ಲಿ ಒಂದು ಇಡಿಯಾದ ತೆಂಗಿನಕಾಯಿಯನ್ನೇ ಉಪಯೊಗಿಸಿದ್ದಾರೆ. ಈ ಭಾಗಕ್ಕೆ ಪ್ರತಿವರ್ಷ ಹೊಸ ತೆಂಗಿನಕಾಯಿ ಇಟ್ಟರೆ ಆಯಿತು. ಪೂಜೆಯ ನಂತರ ಸಾಂಕೇತಿಕವಾಗಿ ಗಣಪನನ್ನು ನೀರಿನಲ್ಲಿ ಮುಳುಗಿಸಿದ ಮೇಲೆ ಈ ಕಾಯಿಯನ್ನು ಒಡೆದು ’ಪ್ರಸಾದ’ದ ರೂಪದದಲ್ಲಿ ಬಳಸಬಹುದು ಅಥವಾ ನೀರಿನಲ್ಲಿ ಮೊಳಕೆ ಬರುವವರೆಗೆ ಹಾಗೆಯೇ ಬಿಟ್ಟು ನಂತರ ಅದನ್ನು ಬೆರೆಡೆ ನೆಡಬಹುದು!! ಆವರ ಕೆಲವು ಗಣಪತಿಗಳನ್ನು ಇಲ್ಲಿ ಕಾಣಬಹುದು.

ಹಲವು ಸಂಸ್ಥೆಗಳು ಈಗ ಇವುಗಳ ಬಗ್ಗೆ ವಿಡಿಯೋ ತಯಾರಿಸಿ ಜನರಗೆ ಮುಟ್ಟುವಂತೆ ಮಾಡಿದ್ದಾರೆ

ಇಲ್ಲಿ ಮಣ್ಣಿನ ಗಣಪ ಸಿಗುವುದಿಲ್ಲ ಅನ್ನೋ ಕಾರಣಕ್ಕೆ ನಾನು ಮತ್ತು ನನ್ನ ಅನೆಕ ಗೆಳತಿಯರು ಮಣ್ಣಿನಿಂದ, ಅರಿಶಿನದಿಂದ, ಗೋಧಿಹಿಟ್ಟಿನಿಂದ ಗಣೇಶನನ್ನು ಮಾಡಿ ಪೂಜಿಸಿದ್ದೆವು. ಅವುಗಳ ಫೋಟೋಗಳು ಇಲ್ಲಿ ಮತ್ತು ಇಲ್ಲಿವೆ.

ಸಿಡ್ನಿಯಲ್ಲಿರುವ ತೆಲುಗು ಅಸೊಸಿಯೇಷನ್ ಅವರು ಮಕ್ಕಳಿಗಾಗಿ ’ಗಣಪ ಮಾಡಿ ನೋಡು’ ಶಿಬಿರ ಏರ್ಪಡಿಸಿದ್ದರು. ಅದರ ವಿಡಿಯೋ ಇಲ್ಲಿ ಮತ್ತು ಇಲ್ಲಿ.

ಅಲ್ಲದೇ ಅಮೇರಿಕದ ನ್ಯೂಯಾರ್ಕಿನಲ್ಲಿರುವ ಜೆನ್ನಿಫರ್ ಅವರು ತಮ್ಮ ಪತಿ ಕುಮಾರ್ ಅವರನ್ನು ಮದುವೆಯಾದಮೇಲೆ ತಮ್ಮ ಮನೆಯಲ್ಲಿ ಪ್ರತಿವರ್ಷವೂ ತಾವೇ ಸ್ವತಃ ಗೋಧಿಹಿಟ್ಟಿನಿಂದ ಗಣಪನನ್ನು ಮಾಡಿ ಪೂಜಿಸುತ್ತಿದ್ದಾರೆ ನೋಡಿ.
ನೀವು ಕೂಡ ಈ ವರ್ಷ ಪರಿಸರ ಗಣಪನನ್ನು ಪೂಜಿಸಿರಿ ಮತ್ತು ಈ ವಿಚಾರವನ್ನು ನಿಮ್ಮ ಗೆಳೆಯರಲ್ಲೂ ಹಂಚಿಕೊಳ್ಳಿ.
ಈಗ ಮತ್ತೆ ಬಂದಿರುವ ಗಣಪ!
ಅವನಿಂದ ಆಗದಿರಲಿ ಪರಿಸರಕ್ಕೆ ಲೋಪ!!

ಅಂದ ಹಾಗೆ ಹೇಳೋದು ಮರೆತಿದ್ದೆ, ಕಳೆದ ವರ್ಷ ಗಣೇಶ ಹಬ್ಬದ ಒಂದು ದಿನಕ್ಕೆ ಮುಂಚೆ ನನ್ನೀ ಬ್ಲಾಗ್ ಶುರು ಮಾಡಿದ್ದೆ!