

ಹೊಯ್ಸಲ ತ್ರಿಕೂಟಾಚಲ ಶೈಲಿಯಲ್ಲಿ ನಿರ್ಮಿತವಾಗಿರುವ ಗುಡಿ ಒಂದು ಮೀಟರ್ ನಷ್ಟು ಎತ್ತರದ ಅಡಿಪಾಯದ ಮೇಲೆ ನಿಂತಿದೆ. ಪಶ್ಚಿಮಕ್ಕಿರುವ ಕೂಟವು ಹದಿನಾರು ಮೂಲೆಗಳಿರುವ ನಕ್ಷತ್ರದ ಆಕಾರದಲ್ಲಿದೆ, ಹಾಗು ಇದರ ಶಿಖರ ಮತ್ತು ಕಲಶ ಇಂದಿಗೂ ಭದ್ರವಾಗಿದೆ. ಉತ್ತರ-ದಕ್ಷಿಣದಲ್ಲಿರುವ ಕೂಟಗಳು ಚೌಕಟ್ಟಾಗಿವೆ. ಗುಡಿಗಿರುವುದು ಒಂದೇ ಗೋಪುರ.

ದೇವಸ್ಥಾನದ ಹೊರ ಗೋಡೆಗಳು ಸುಂದರವಾದ ಕೆತ್ತನೆಗಳಿಂದ ಆವೃತವಾಗಿದೆ. ಕೆಳಭಾಗದಲ್ಲಿ ಆನೆಗಳ ಸಾಲುಗಳ ಮದ್ಯೆ ಸಲಗನೊಡನೆ ಹೋರಾಡುತ್ತಿರುವ ವೀರನೊಬ್ಬನ ಕೆತ್ತನೆ. ನಂತರದ ಸಾಲಿನಲ್ಲಿ ರಾಮಾಯಣ, ಮಹಾಭಾರತ, ಭಾಗವತದ ಸನ್ನಿವೇಶಗಳನ್ನು ವರ್ಣಿಸುವ ಕೆತ್ತನೆಗಳು. ಹಂಸಗಳ ಸಾಲೂಯಿದೆ. ಎಲ್ಲಕ್ಕಿಂತ ಅಧ್ಭುತವಾಗಿರೋದು ಮಧ್ಯದ ಸಾಲು. ನಾಟ್ಯ ಗಣಪತಿ, ನಾಟ್ಯ ಸರಸ್ವತಿ, ಮಾಧವ, ಮೋಹಿನಿ, ಪಾರ್ವತಿ, ನರಸಿಂಹ ಮುಂತಾದ ದೇವರುಗಳನ್ನು ಅತಿ ಸುಂದರವಾಗಿ ಬಿತ್ತರಿಸಲಾಗಿದೆ.



ನವರಂಗದಲ್ಲಿರುವ ಕಂಬಗಳು ಸಣ್ಣ ಕುಸುರಿ ಕೆತ್ತನೆಗಳನ್ನೊಳಗೊಂಡಿದೆ. ಇಲ್ಲಿರುವ ಕೆಲವು ಕಂಭಗಳಲ್ಲೂ ಸಂಗೀತ ಹೊಮ್ಮುತ್ತದೆ. ಬೇಲೂರಿನಲ್ಲಿರುವ ಮದನಿಕೆಯನ್ನು ಹೋಲುವ ನಾಟ್ಯ ಭಂಗಿಗಳು ಇಲ್ಲೂ ಇವೆ. ದೇವಸ್ಥಾನದ ಮುಖ್ಯ ದೇವರು ಶ್ರೀಲಕ್ಷ್ಮಿನಾರಾಯಣ ವಿಗ್ರಹವು ಪಶ್ಚಿಮಕೂಟದಲ್ಲಿ ಪ್ರತಿಸ್ಥಾಪಿಸಲಾಗಿದೆ. ಗರ್ಭಗುಡಿಯ ಎದುರಿರುವ ಕಂಭದಲ್ಲಿ ಹೆಬ್ಬರಳಿನ ಅಂಗುಷ್ಟ ಗಾತ್ರದ ಸ್ಟ್ರಾ ನಲ್ಲಿ ಎಳನೀರು ಕುಡಿಯುತ್ತಿರೋ ಆಂಜನೇಯ ವಿಗ್ರಹವಿದೆ. ಬೆಳಕು ಹೆಚ್ಚಿಲ್ಲವಾದ್ದರಿಂದ ಕಾಣೋಲ್ಲ. ಪೂಜಾರಿಯವರನ್ನು ಕೇಳಿದರೆ ದೀಪದ ಬೆಳಕಿನಲ್ಲಿ ತೋರಿಸುವರು.


ನಮ್ಮೂರಿಗೆ ದಾರಿ:
ಮೈಸೂರಿನಿಂದ ಕೇವಲ 53ಕಿ.ಮಿ ದೂರದಲ್ಲಿರೋ ನಮ್ಮೂರಿಗೆ ಬೆಂಗಳೂರು/ ಮೈಸೂರು/ ಹಾಸನ ಎಲ್ಲಾ ಕಡೆಗಳಿಂದಲೂ ಬಸ್ ವ್ಯವಸ್ಥೆಯಿದೆ. ಕೃಷ್ಣರಾಜಪೇಟೆ(ಕೆ.ಆರ್.ಪೇಟೆ) ಅಲ್ಲಿಂದ ೨-೩ ಕಿ.ಮಿ, ಅಲ್ಲಿ ಸುಸಜ್ಜಿತ PWD ಗೆಸ್ಟ್ ಹೌಸ್ ಕೂಡ ಇದೆ.
ನಮ್ಮೂರಿಗೆ ಹೋಗಲು ಬೆಂಗಳೂರು-ಮೈಸೂರ್ ಹೆದ್ದಾರಿಯಲ್ಲಿ ಇನ್ನೇನು ಶ್ರೀರಂಗಪಟ್ಟಣ ಒಂದು ಕಿ.ಮಿ ಇದೆ ಅನ್ನೋವಾಗ ಬಲಗಡೆಗೆ ಒಂದು ತಿರುವು ಸಿಗುತ್ತೆ (ಕೃಷ್ಣರಾಜ ಪೇಟೆ ಅಂತ ಸಣ್ಣದೊಂದು ಬೋರ್ಡ್ ಇದೆ). ಅಲ್ಲಿ ಬಲಕ್ಕೆ ತಿರುಗಿ ನಲವತ್ತು ಕಿಲೋಮೀಟರ್ ಹೋದರೆ ಕೆ.ಆರ್. ಪೇಟೆ ಸಿಗುತ್ತೆ(ಮಾರ್ಗದಲ್ಲಿ ಪಾಂಡವಪುರ ಸಿಗುತ್ತೆ) . ಅಲ್ಲಿ ಸರ್ಕಲ್-ನಲ್ಲಿ ಎಡಕ್ಕೆ ತಿರುಗಿ ಎರಡೂವರೆ ಕಿಮಿ ಬಂದ್ರೆ ಹೊಸಹೊಳಲು ಸಿಗುತ್ತೆ.
ನಮ್ಮೂರಿನ ಬಗ್ಗೆ ವೈಕಿಪೀಡಿಯಾ ಹೀಗೆನ್ನುತ್ತದೆ.
ದೇವಸ್ಥಾನದ ಬಗ್ಗೆ ಸರ್ಕಾರ ನಿರ್ಲಕ್ಷ್ಯ ತೋರಿದೆ. ಇದಕ್ಕೊಂದು ಸರಿಯಾದ ಕಾಂಪೊಂಡ್ ಹಾಕಿದ್ದು ಇತ್ತೀಚೆಗೆ. ನಾನು ಚಿಕ್ಕವಳಿದ್ದಾಗ ಮಕ್ಕಳು ದೇವಸ್ಥಾನದ ಗೋಪುರದ ಮೇಲೆಲ್ಲಾ ಹತ್ತಿ ಬಚ್ಚಿಟ್ಟುಕೊಳ್ಳುವ ಆಟ ಇತ್ಯಾದಿ ಆಡುತ್ತಿದ್ದರು. ಕೆತ್ತನೆಗಳನ್ನು ಕಲ್ಲಿನಿಂದ ಚೆಚ್ಚುತ್ತಿದ್ದರು:(