Saturday, June 27, 2009

ನೋಡು ಬಾ ನೋಡು ಬಾ ನಮ್ಮ ತಾತನೂರ !!!

ಅಜ್ಜಿ-ತಾತನ ಊರು ಅಂದ್ರೆ ಎಲ್ಲರಿಗೂ ವಿಶೇಷವಾದ ಪ್ರೀತಿಯಿರುತ್ತೆ. ೩ ವರ್ಷದವಳಿದ್ದಾಲೇ ಅಜ್ಜಿ-ತಾತರನ್ನು ಕಳೆದುಕೊಂಡ ನನಗೆ ನಮ್ಮ್ ತಾತನ ಊರಿನ ಬಗ್ಗೆ ಪ್ರೀತಿ ಹುಟ್ಟಲು ಕಾರಣವೇ ಅಲ್ಲಿರುವ ದೇವಸ್ಥಾನ. ನನ್ನ ತಾತನ (ತಂದೆಯ ತಂದೆ) ಊರು ಮಂಡ್ಯ ಜಿಲ್ಲೆಯಲ್ಲಿರುವ ಹೊಸಹೊಳಲು, ಹೊಯ್ಸಳ ಶೈಲಿಯ ಗುಡಿಯಿರುವ ಊರು. 'ಹೊಳಲು' ಅಂದರೆ ಹಳೆಗನ್ನಡದಲ್ಲಿ ಪಟ್ಟಣವೆಂದು. ಊರಿನಲ್ಲಿರೋ ಶಿಲಾಶಾಸನದ ಪ್ರಕಾರ 1125 ADಯಲ್ಲಿ ವೀರ ಗಂಗನರಸಿಂಹ ಬಲ್ಲಾಳರ ಕಾಲದಲ್ಲಿ ನೊಳಂಬ ಶೆಟ್ಟಿ ಮತ್ತು ನಂದಿನಾಥ ವೀರಭದ್ರದೇವ ಅನ್ನೋರು ಈ ದೇವಸ್ಥಾನವನ್ನು ಕಟ್ಟಿಸಿದ್ದು. ಈ ಊರು ಹಿಂದೆ ಅಗ್ರಹಾರವಾಗಿತ್ತಂತೆ. ಇಲ್ಲಿರುವರೆಲ್ಲ ರೈತಾಪಿ ಹಾಗು ನೇಯ್ಗೆ ಆಧಾರಿತ ಕುಟುಂಬಗಳು.
ಹೊಯ್ಸಲ ತ್ರಿಕೂಟಾಚಲ ಶೈಲಿಯಲ್ಲಿ ನಿರ್ಮಿತವಾಗಿರುವ ಗುಡಿ ಒಂದು ಮೀಟರ್ ನಷ್ಟು ಎತ್ತರದ ಅಡಿಪಾಯದ ಮೇಲೆ ನಿಂತಿದೆ. ಪಶ್ಚಿಮಕ್ಕಿರುವ ಕೂಟವು ಹದಿನಾರು ಮೂಲೆಗಳಿರುವ ನಕ್ಷತ್ರದ ಆಕಾರದಲ್ಲಿದೆ, ಹಾಗು ಇದರ ಶಿಖರ ಮತ್ತು ಕಲಶ ಇಂದಿಗೂ ಭದ್ರವಾಗಿದೆ. ಉತ್ತರ-ದಕ್ಷಿಣದಲ್ಲಿರುವ ಕೂಟಗಳು ಚೌಕಟ್ಟಾಗಿವೆ. ಗುಡಿಗಿರುವುದು ಒಂದೇ ಗೋಪುರ.
ದೇವಸ್ಥಾನದ ಹೊರ ಗೋಡೆಗಳು ಸುಂದರವಾದ ಕೆತ್ತನೆಗಳಿಂದ ಆವೃತವಾಗಿದೆ. ಕೆಳಭಾಗದಲ್ಲಿ ಆನೆಗಳ ಸಾಲುಗಳ ಮದ್ಯೆ ಸಲಗನೊಡನೆ ಹೋರಾಡುತ್ತಿರುವ ವೀರನೊಬ್ಬನ ಕೆತ್ತನೆ. ನಂತರದ ಸಾಲಿನಲ್ಲಿ ರಾಮಾಯಣ, ಮಹಾಭಾರತ, ಭಾಗವತದ ಸನ್ನಿವೇಶಗಳನ್ನು ವರ್ಣಿಸುವ ಕೆತ್ತನೆಗಳು. ಹಂಸಗಳ ಸಾಲೂಯಿದೆ. ಎಲ್ಲಕ್ಕಿಂತ ಅಧ್ಭುತವಾಗಿರೋದು ಮಧ್ಯದ ಸಾಲು. ನಾಟ್ಯ ಗಣಪತಿ, ನಾಟ್ಯ ಸರಸ್ವತಿ, ಮಾಧವ, ಮೋಹಿನಿ, ಪಾರ್ವತಿ, ನರಸಿಂಹ ಮುಂತಾದ ದೇವರುಗಳನ್ನು ಅತಿ ಸುಂದರವಾಗಿ ಬಿತ್ತರಿಸಲಾಗಿದೆ.
ನವರಂಗದಲ್ಲಿರುವ ಕಂಬಗಳು ಸಣ್ಣ ಕುಸುರಿ ಕೆತ್ತನೆಗಳನ್ನೊಳಗೊಂಡಿದೆ. ಇಲ್ಲಿರುವ ಕೆಲವು ಕಂಭಗಳಲ್ಲೂ ಸಂಗೀತ ಹೊಮ್ಮುತ್ತದೆ. ಬೇಲೂರಿನಲ್ಲಿರುವ ಮದನಿಕೆಯನ್ನು ಹೋಲುವ ನಾಟ್ಯ ಭಂಗಿಗಳು ಇಲ್ಲೂ ಇವೆ. ದೇವಸ್ಥಾನದ ಮುಖ್ಯ ದೇವರು ಶ್ರೀಲಕ್ಷ್ಮಿನಾರಾಯಣ ವಿಗ್ರಹವು ಪಶ್ಚಿಮಕೂಟದಲ್ಲಿ ಪ್ರತಿಸ್ಥಾಪಿಸಲಾಗಿದೆ. ಗರ್ಭಗುಡಿಯ ಎದುರಿರುವ ಕಂಭದಲ್ಲಿ ಹೆಬ್ಬರಳಿನ ಅಂಗುಷ್ಟ ಗಾತ್ರದ ಸ್ಟ್ರಾ ನಲ್ಲಿ ಎಳನೀರು ಕುಡಿಯುತ್ತಿರೋ ಆಂಜನೇಯ ವಿಗ್ರಹವಿದೆ. ಬೆಳಕು ಹೆಚ್ಚಿಲ್ಲವಾದ್ದರಿಂದ ಕಾಣೋಲ್ಲ. ಪೂಜಾರಿಯವರನ್ನು ಕೇಳಿದರೆ ದೀಪದ ಬೆಳಕಿನಲ್ಲಿ ತೋರಿಸುವರು.

ನಮ್ಮೂರಿಗೆ ದಾರಿ:
ಮೈಸೂರಿನಿಂದ ಕೇವಲ 53ಕಿ.ಮಿ ದೂರದಲ್ಲಿರೋ ನಮ್ಮೂರಿಗೆ ಬೆಂಗಳೂರು/ ಮೈಸೂರು/ ಹಾಸನ ಎಲ್ಲಾ ಕಡೆಗಳಿಂದಲೂ ಬಸ್ ವ್ಯವಸ್ಥೆಯಿದೆ. ಕೃಷ್ಣರಾಜಪೇಟೆ(ಕೆ.ಆರ್.ಪೇಟೆ) ಅಲ್ಲಿಂದ ೨-೩ ಕಿ.ಮಿ, ಅಲ್ಲಿ ಸುಸಜ್ಜಿತ PWD ಗೆಸ್ಟ್ ಹೌಸ್ ಕೂಡ ಇದೆ.

ನಮ್ಮೂರಿಗೆ ಹೋಗಲು ಬೆಂಗಳೂರು-ಮೈಸೂರ್ ಹೆದ್ದಾರಿಯಲ್ಲಿ ಇನ್ನೇನು ಶ್ರೀರಂಗಪಟ್ಟಣ ಒಂದು ಕಿ.ಮಿ ಇದೆ ಅನ್ನೋವಾಗ ಬಲಗಡೆಗೆ ಒಂದು ತಿರುವು ಸಿಗುತ್ತೆ (ಕೃಷ್ಣರಾಜ ಪೇಟೆ ಅಂತ ಸಣ್ಣದೊಂದು ಬೋರ್ಡ್ ಇದೆ). ಅಲ್ಲಿ ಬಲಕ್ಕೆ ತಿರುಗಿ ನಲವತ್ತು ಕಿಲೋಮೀಟರ್ ಹೋದರೆ ಕೆ.ಆರ್. ಪೇಟೆ ಸಿಗುತ್ತೆ(ಮಾರ್ಗದಲ್ಲಿ ಪಾಂಡವಪುರ ಸಿಗುತ್ತೆ) . ಅಲ್ಲಿ ಸರ್ಕಲ್-ನಲ್ಲಿ ಎಡಕ್ಕೆ ತಿರುಗಿ ಎರಡೂವರೆ ಕಿಮಿ ಬಂದ್ರೆ ಹೊಸಹೊಳಲು ಸಿಗುತ್ತೆ.

ನಮ್ಮೂರಿನ ಬಗ್ಗೆ ವೈಕಿಪೀಡಿಯಾ ಹೀಗೆನ್ನುತ್ತದೆ.

ದೇವಸ್ಥಾನದ ಬಗ್ಗೆ ಸರ್ಕಾರ ನಿರ್ಲಕ್ಷ್ಯ ತೋರಿದೆ. ಇದಕ್ಕೊಂದು ಸರಿಯಾದ ಕಾಂಪೊಂಡ್ ಹಾಕಿದ್ದು ಇತ್ತೀಚೆಗೆ. ನಾನು ಚಿಕ್ಕವಳಿದ್ದಾಗ ಮಕ್ಕಳು ದೇವಸ್ಥಾನದ ಗೋಪುರದ ಮೇಲೆಲ್ಲಾ ಹತ್ತಿ ಬಚ್ಚಿಟ್ಟುಕೊಳ್ಳುವ ಆಟ ಇತ್ಯಾದಿ ಆಡುತ್ತಿದ್ದರು. ಕೆತ್ತನೆಗಳನ್ನು ಕಲ್ಲಿನಿಂದ ಚೆಚ್ಚುತ್ತಿದ್ದರು:(

Thursday, June 11, 2009

ಯಾವ ತಾಯಿಯು ಹಡೆದ ಮಗಳಾದರೇನು - ಬಿಳಿ ಹೆಂಡ್ತಿ

ಎಂ.ಜೆ.ಎಂ. ಪ್ರೊಡಕ್ಷನ್ಸ್ ಅವರ, ಮ.ನ.ಮೂರ್ತಿಯವರ ಕಾದಂಬರಿ ಆಧಾರಿತ ಚಿತ್ರ ’ಬಿಳಿ ಹೆಂಡ್ತಿ’ ಯಲ್ಲಿರೋ ಈ ಹಾಡು ನನ್ನ ನೆಚ್ಚಿನ ಗೀತೆಗಳಲ್ಲೊಂದು.
ಸಾಹಿತ್ಯ : ವಿಜಯನರಸಿಂಹ
ಸಂಗೀತ : ವಿಜಯಭಾಸ್ಕರ್
ಗಾಯನ : ಕಸ್ತೂರಿ ಶಂಕರ್

ಯಾವ ತಾಯಿಯು ಹಡೆದ ಮಗಳಾದರೇನು
ಕನ್ನಡಾಂಬೆಯ ಮಡಿಲ ಹೂವಾದೆ ನೀನು
ಯಾವ ತಾಯಿಯು ಹಡೆದ ಮಗಳಾದರೇನು
ಕನ್ನಡಾಂಬೆಯ ಮಡಿಲ ಹೂವಾದೆ ನೀನು
ಯಾವ ತಾಯಿಯು ಹಡೆದ ಮಗಳಾದರೇನು

ಈ ತಾಯ ಕರುಣೆಯ ತಂಪಿನಲಿ
ಈ ತಾಯ ಕಣ್ಣಿನ ಕಾಂತಿಯಲಿ
ಈ ತಾಯ ಬಂಧನದ ರಕ್ಷೆಯಲ್ಲಿ
ಈ ತಾಯ ಬಂಧನದ ರಕ್ಷೆಯಲ್ಲಿ
ಈ ಮನೆಗೆ ನೀನಾಗು ಕಲ್ಪವಲ್ಲಿ
ಯಾವ ತಾಯಿಯು ಹಡೆದ ಮಗಳಾದರೇನು

ಈ ಮನೆಯ ಭಾಗ್ಯದ ಬಾಗಿಲಲ್ಲಿ
ಈ ಮನೆಯ ಧರ್ಮದ ದೀಪದಲ್ಲಿ
ಈ ಮನೆಯ ಪ್ರೀತಿಯ ಗೀತೆಯಲ್ಲಿ
ಈ ಮನೆಯ ಪ್ರೀತಿಯ ಗೀತೆಯಲ್ಲಿ
ಈ ಮನೆಗೆ ನೀನಾಗು ಕಲ್ಪವಲ್ಲಿ
ಯಾವ ತಾಯಿಯು ಹಡೆದ ಮಗಳಾದರೇನು

ಈ ಬಾಳ ಪೂಜೆಯ ರಾಶಿಯಲ್ಲಿ
ಈ ಬಾಳ ಹಾದಿಯ ಸಂಗಮದಲ್ಲಿ
ಈ ಬಾಳ ಹಾಡಿನ ಪಲ್ಲವಿಯಲ್ಲಿ
ಈ ಮನೆಗೆ ನೀನಾಗು ಕಲ್ಪವಲ್ಲಿ
ಯಾವ ತಾಯಿಯು ಹಡೆದ ಮಗಳಾದರೇನು
ಕನ್ನಡಾಂಬೆಯ ಮಡಿಲ ಹೂವಾದೆ ನೀನು
ಯಾವ ತಾಯಿಯು ಹಡೆದ ಮಗಳಾದರೇನು


Saturday, June 6, 2009

ನಾಲಗೆ ತಿರುಚು (ಟಂಗ್ ಟ್ವಿಸ್ಟರ್) !

ಮೊನ್ನೆ ಗೆಳೆಯರು ಬಂದಿದ್ರು. ಊಟದ ನಂತರ ನಮ್ಮ್ ಪುಟ್ಟಿ ಮಲಗಿ ಬಿಟ್ಟಿದ್ರಿಂದ ಬಂದಿದ್ದ ಗೆಳೆಯರ ಮಗಳೊಂದಿಗೆ ನಾನೇ ಆಡಬೇಕಾಯ್ತು. ಅವಳೂ ಅದೂ ಇದೂ ಹಾಡುಗಳನ್ನು ಹೇಳುತ್ತಾ ಕುಣಿಯುತ್ತಾ ಕೊನೆಗೆ ಇದನ್ನ ಫಾಸ್ಟ್ ಆಗಿ ಹೇಳಿ ನೋಡೋಣ ಅಂತ " ಬೆಟ್ಟಿ ಬಾಟ್ ಅ ಬಿಟ್ ಆಫ್ ಬಟರ್, ಬಟ್ ದ ಬಟರ್ ವಾಸ್ ಬಿಟ್ಟರ್" ನಾಲಗೆ ತಿರುಚೊಂದು (ಟಂಗ್ ಟ್ವಿಸ್ಟರ್) ಹೇಳಿದ್ಲು. ಅದನ್ನ ಹೇಳಲೋಗಿ ಅವಳೊಂದಿಗೆ ನಾವೂ ಸ್ವಲ್ಪ ಬ್ ಬ್ಬ್ ಬ್ ಅಂತೆಲ್ಲ ಬೊಬ್ಬೆ ಹಾಕಿ ನಕ್ಕಿದ್ದು ಆಯ್ತು.

ಅವರೆಲ್ಲ ಮನೆ ಸೇರಿದ ಮೇಲೆ ನನಗೆ ನಮ್ಮ ಕನ್ನಡದ ನಾಲಗೆ ತಿರುಚುಗಳ ನೆನಪಾಯಿತು. ಕನ್ನಡದ ಕೆಲವು ನಾಲಗೆ ತಿರಚುಗಳು ಮಾತ್ರ ನನಗೆ ಗೊತ್ತಿದ್ದವು. ಸರಿ ಅಮ್ಮನಿಗೆ ಒಂದು ಫೋನ್ ಮಾಡಿ ಅವರಿಂದ ಇನ್ನೊಂದಿಷ್ಟನ್ನ ಕಲಿತೆ. ಅವುಗಳ ಪಟ್ಟಿ ಇಲ್ಲಿದೆ.

"ಕಪ್ಪು ಕುಂಕುಮ, ಕೆಂಪು ಕುಂಕುಮ"
"ಕಾಗೆ ಪುಕ್ಕ, ಗುಬ್ಬಿ ಪುಕ್ಕ"

ಮೇಲಿನ ಸಾಲುಗಳು ನೋಡಲು ಸರಳವಾಗಿ ಕಂಡರೂ, ಅದರ ಒಳಗುಟ್ಟು ಗೊತ್ತಾಗೋದು ಅದನ್ನ ನಾವು ವೇಗವಾಗಿ ಹೇಳಲು ಯತ್ನಿಸಿದಾಗ ಮಾತ್ರ.

"ಅವಳರಳಳೆದ ಕೊಳಗದಲಿ ಇವಳರಳಳೆದಳು'


ಅರಳೀಮರಬುಡ ತಳಿರೊಡೆದೆರಡೆಲೆ ಮತ್ತೆರಡೆಲೆ ಹೆಚ್ಚಾಯ್ತು


"ಆಲದಮರಬುಡತಳಿರೊಡೆದೆರೆಡೆಲೆಯಾಯಿತು"


"ತರಿಕೆರೆಕೆರೆ ಏರಿ ಮೇಲೆ ಮೂರು ಕರಿಕುರಿಮರಿ ಮೇಯ್ತಿತ್ತು" ಇದನ್ನ ಹೇಳೋಕೆ ನಾವು ಕಷ್ಟ ಪಡುವಾಗ ’ದೇವರ ದುಡ್ಡ’ ಚಿತ್ರದಲ್ಲಿ ಎಸ್.ಪಿ.ಬಾಲಸುಬ್ರಮಣ್ಯಂ ಅವರು ಎಷ್ಟ್ ಚೆನ್ನಾಗಿ ಹಾಡಿದ್ದಾರೆ ಕೇಳಿ.
"ಯಾಕ್ ಯಕ್ ಚಿಕ್ಕಪ್ಪ ಕಣ್ ಕಣ್ ಬಿಡ್ತಿಯ" ಇದನ್ನು ವೇಗವಾಗಿ ಹೇಳುತ್ತಾ ಹೋದರೆ.. ಚಿಕ್ಕಪ್ಪ.. ಚಿಪ್ಪಕ್ಕ ಆಗಿರುತ್ತಾನೆ..


"ಸಂಪಂಗಪ್ಪನ ಮಗ ಮರಿಸಂಪಂಗಪ್ಪ" ಇದರಲ್ಲೇ ಸ್ವಲ್ಪ ಭಿನ್ನವಾದದ್ದು ಇನ್ನೆರಡು

"ಸಂಪಂಗಪ್ಪನ ಮಗ ಮರಿಸಂಪಂಗಪ್ಪ. ಮರಿಸಂಪಂಗಪ್ಪನ ಅಪ್ಪ ಸಂಪಂಗಪ್ಪ"

ಸಂಪಿಗೆ ಕೆಂಪುಗಂಗಪ್ಪನ ಮಗ ಮರಿಕೆಂಪುಗಂಗಪ್ಪಅನ್ನೋದನ್ನ ಬೇಗಬೇಗ ಹೇಳುತ್ತಾ ಹೋದರೆ ಗಂಗಪ್ಪ ಗಂಗಮ್ಮನಾಗಿ ಬದಲಾಗುತ್ತಾನೆ.


"ಬಂಕಾಪುರದ ಕೆಂಪು ಕುಂಕುಮ ಬಂಕಾಪುರದ ಕೆಂಪು ಕುಂಕುಮ ಬಂಕಾಪುರದ ಕೆಂಪು ಕುಂಕುಮ"

ಜಂಬಗಿ ತೂಕಪ್ಪ ತುಂಬಿದ ತುಪ್ಪದ ತಂಬಿಗಿ ತಂದಾನ'

"ತಾತಪ್ಪ ತುಂಬಿದ ತುಪ್ಪದ ತಂಬಿಗೆ ತಂದಾನ"

"ಕುರುಡು ಕುದುರೆಗೆ ಹುರಿದ ಹುರ್ಕಡ್ಲಿ"


ತಮಿಳಿನಲ್ಲೂ ಇಂಥದೊಂದು ಇದೆಯೆಂದು ಸ್ನೇಹಿತರು ಹೇಳಿದ್ರು: ಇದು ಯಾರ್‍ ತೆಚ್ಚ ಚಟ್ಟೆ, ಎಂಗ ತಾತ ತೆಚ್ಚ ಚಟ್ಟೆ (ಇದು ಯಾರು ಹೊಲಿದ ಅಂಗಿ, ನಮ್ಮ ತಾತ ಹೊಲಿದ ಅಂಗಿ) ಇದನ್ನು ವೇಗವಾಗಿ ಹೇಳುತ್ತಿದ್ದರೆ ಎಲ್ಲೋ ಒಂದು ಕಡೆ ತಾತ ಚತ್ತ’ (ತಾತ ಸತ್ತ) ಅಂತ ಆಗಿಬಿಡುತ್ತೆ.


ಮೇಲಿನ ಸಾಲುಗಳಲ್ಲಿ ಯಾವುದಾದರೂ ಒಂದನ್ನು ವೇಗವಾಗಿ ಹೇಳಲು ಪ್ರಯತ್ನಿಸಿ. ಎರಡು ಅಥವಾ ಮೂರು ಸಾರಿ ವೇಗವಾಗಿ ಹೇಳುವಷ್ಟರಲ್ಲಿ ನಿಮ್ಮ ನಾಲಗೆ ಹೇಗೆ ತೊಡರಿಕೊಳ್ಳುತ್ತೆ ಅಂತ ನೀವೇ ಅನುಭವಿಸಿ, ಆನಂದಿಸಿ! ಈ ನಾಲಗೆ ತಿರುಚುಗಳ ಮೋಜಿನ ಆಟ ಹೇಗಿತ್ತು ಅಂತ ತಪ್ಪದೇ ತಿಳಿಸಿ ಆಯ್ತಾ ;) ಹಾಗೇನೆ ನಿಮಗೆ ಇನ್ನೂ ಹಲವಾರು ಕನ್ನಡದ ನಾಲಗೆ ತಿರುಚುಗಳು ತಿಳಿದಿದ್ದಲ್ಲಿ, ದಯವಿಟ್ಟು ಹಂಚಿಕೊಳ್ಳುತ್ತೀರಾ?